ಎಚ್‌ಡಿಕೆ ವಿರುದ್ಧ ಹೇಳಿಕೆ ಉದ್ಧಟತನದ ಪರಮಾವಧಿ
ದೊಡ್ಡಬಳ್ಳಾಪುರ: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಜೆಡಿಎಸ್ ಟಿಕೆಟ್ ವಂಚಿತ ಬಿ.ಮುನೇಗೌಡ ನೀಡಿರುವ ಹೇಳಿಕೆ ಉದ್ಧಟತನದ ಪರಮಾವಧಿ ಎಂದು ಜೆಡಿಎಸ್ ಮುಖಂಡ ಜಿ.ಸತ್ಯನಾರಾಯಣ್ ಹೇಳಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೂಡಲೇ ಅವರು ತಮ್ಮ ಆರೋಪವನ್ನು ಹಿಂಪಡೆದು ಬಹಿರಂಗ ಕ್ಷಮೆ ಯಾಚಿಸಬೇಕು. ಗ್ರಾಮ ಪಂಚಾಯಿತಿಯಿಂದ ಜಿಪಂ ಅಧ್ಯಕ್ಷ ಸ್ಥಾನದವರೆಗೆ ಅವರು ಪಕ್ಷವನ್ನು ಬಳಸಿಕೊಂಡಿದ್ದಾರೆ. ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ 48ಸಾವಿರ ಇದ್ದ ಜೆಡಿಎಸ್ ಮತಗಳನ್ನು 20 ಸಾವಿರಕ್ಕೆ ತಂದು ನಿಲ್ಲಿಸಿದ ಕುಖ್ಯಾತಿ ಮುನೇಗೌಡರಿಗೇ ಸಲ್ಲುತ್ತದೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಇಂದಿಗೂ ಯಾವ ಪ್ರತಿಫಲಾಪೇಕ್ಷೆ ಇಲ್ಲದೆ ದುಡಿಯುತ್ತಿದ್ದಾರೆ. ಬಹಿರಂಗವಾಗಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಅವರಿಗೆ ಜೆಡಿಎಸ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದಿದ್ದಾರೆ.
ರೊಚ್ಚಿಗೆದ್ದ ಪ್ರಯಾಣಿಕರ ಪ್ರತಿಭಟನೆ
ಚನ್ನಪಟ್ಟಣ: ಜನಗಳನ್ನು ಕರೆದೊಯ್ಯುತ್ತಿದ್ದ ಟ್ರ್ಯಾಕ್ಟರ್ ತಡೆದು ತಪಾಸಣೆ ನಡೆಸಲು ಮುಂದಾದ ಪೊಲೀಸರ ಕ್ರಮದಿಂದ ರೊಚ್ಚಿಗೆದ್ದ ಪ್ರಯಾಣಿಕರು ಪ್ರತಿಭಟನೆ ನಡೆಸಿದ ಘಟನೆ ತಾಲೂಕಿನ ಕೋಲೂರು ಗೇಟ್ ಸಮೀಪ ಶನಿವಾರ ಸಂಜೆ ನಡೆದಿದೆ. ಬೆಂಗಳೂರು ಕಡೆಯಿಂದ ಬರುತ್ತಿದ್ದ ಟ್ರಾಕ್ಟರ್‌ನಲ್ಲಿ ಜನತೆ ಪ್ರಯಾಣಿಸುತ್ತಿರುವುದನ್ನು ಕಂಡು ಕೊಲೂರು ಚೆಕ್ ಪೋಸ್ಟ್ ಬಳಿ ಅಡ್ಡಗಟ್ಟಿದ ಪೊಲೀಸರು ತಪಾಸಣೆ ನಡೆಸಲು ಮುಂದಾಗಿದ್ದಾರೆ. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಟ್ರಾಕ್ಟರ್‌ನಲ್ಲಿದ್ದ ಮಂದಿ ನಮ್ಮ ಸಂಬಂಧಿಕರ ಸಾವಿಗೆ ಹೋಗುತ್ತಿದ್ದೇವೆ. ಈ ರೀತಿ ಕಿರಿಕಿರಿ ನೀಡುವುದು ಸರಿಯಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸ್ ಸಿಬ್ಬಂದಿ ಮತ್ತು ಪ್ರಯಾಣಿಕರ ನಡುವೆ ವಾಗ್ವಾದ ಆರಂಭಗೊಂಡಿದೆ. ಪೊಲೀಸರು ಮತ್ತು ಮಹಿಳೆಯರ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಪರಿಣಾಮ ಟ್ರ್ಯಾಕ್ಟರ್‌ನಲ್ಲಿದ್ದ ಮಂದಿ ರಸ್ತೆಗೆ ಅಡ್ಡಕುಳಿತು ಪ್ರತಿಭಟನೆ ನಡೆಸಿದರು. ಸಂಚಾರ ವ್ಯತ್ಯಯ ಉಂಟಾಗಿತ್ತು. ಸ್ಥಳಕ್ಕೆ ಗ್ರಾಮಾಂತರ ವೃತ್ತ ನಿರೀಕ್ಷಕ ಸಿದ್ದಪ್ಪ ಮತ್ತು ಸಿಬ್ಬಂದಿ ಆಗಮಿಸಿ ಪರಿಸ್ಥಿತಿಯನ್ನು ತಿಳಿ ಗೊಳಿಸಿದರು.