ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ನೆರೆಯೂರ ನೆಂಟನಿಗಿಂತ ಇದ್ದೂರ ಹಗೆ ಲೇಸು....

Rashmi Kasaragodu
Updated On : 7 Apr 2013, 12:28 pm

ಕ.ಪ್ರ.ವಾರ್ತೆ  ದೊಡ್ಡಬಳ್ಳಾಪುರ  ಏ.6
ನೆರೆಯೂರ ನೆಂಟನಿಗಿಂತ ಇದ್ದೂರ ಹಗೆ ಲೇಸು  ಎನ್ನುವ ಹಾಗೆ ದೊಡ್ಡಬಳ್ಳಾಪುರಕ್ಕೆ ಚುನಾವಣೆ ಉದ್ದೇಶದಿಂದ ಕಾಲಿಟ್ಟಿರುವ ಜನರಿಗೆ ಇಲ್ಲಿನ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಕೊಳಗೇರಿ ಅಭಿವೃದ್ಧಿ ಮಂಡಲಿ ಅಧ್ಯಕ್ಷ ಮತ್ತು ಶಾಸಕ ಸ್ಥಾನದ ಅಭ್ಯರ್ಥಿ ಜೆ.ನರಸಿಂಹಸ್ವಾಮಿ ಹೇಳಿದ್ದಾರೆ.
ತಾಲೂಕಿನ ರಾಜಘಟ್ಟ ಶ್ರೀಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಅವರು ತಮ್ಮ ಚುನಾವಣಾ ಪ್ರಚಾರಕ್ಕೆ ಶನಿವಾರ ಬೆಳಗ್ಗೆ ಅಧಿಕೃತ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಪ್ರಶಾಂತವಾಗದಿರುವ ದೊಡ್ಡಬಳ್ಳಾಪುರದ ಮೇಲೆ ಕೊರಟಗೆರೆ-ದೇವನಹಳ್ಳಿಗಳಿಂದ ಏಕಕಾಲಕ್ಕೆ ದಾಳಿಯಾಗಿದೆ. ಈ ಹಿಂದೆ ಸೋತು ಪಲಾಯನ ಮಾಡಿದ್ದವರು ಕ್ಷೇತ್ರವನ್ನು ಮರೆತೇ ಹೋಗಿದ್ದರು. ಆದರೆ ಈಗ ಮತ್ತೆ ದಿಢೀರ್ ಪ್ರತ್ಯಕ್ಷವಾಗಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ 348 ಹಳ್ಳಿಗಳಲ್ಲಿ ಅವರಿಗೆ ಎಷ್ಟು ಹಳ್ಳಿ ಗೊತ್ತು, ಹಳ್ಳಿಗಳ ಸಾಮಾನ್ಯ ಜನರನ್ನು ಗುರ್ತಿಸುವ ಸಾಮರ್ಥ್ಯ ಅವರಿಗಿದೆಯೇ ಎಂದು ಪ್ರಶ್ನಿಸಿದ ಅವರು, ಇಲ್ಲಿನ ಜನ ಸ್ವಾಭಿಮಾನಿಗಳು ಎಂಬುದನ್ನು ವಲಸಿಗರು ಮರೆಯಬಾರದು ಎಂದರು.
ದುಡ್ಡಿನಿಂದ ಕೊಂಡ್ಕೋತೀರಾ: ಚನ್ನಿಗಪ್ಪನವರೇ ದೊಡ್ಡಬಳ್ಳಾಪುರಕ್ಕೆ ನಿಮ್ಮ ಕೊಡುಗೆ ಏನು ಎಂಬುದನ್ನು ಮೊದಲು ಸ್ಪಷ್ಟಪಡಿಸಿ. ದುಡ್ಡಿನಿಂದ ದೊಡ್ಡಬಳ್ಳಾಪುರವನ್ನು ಕೊಂಡುಕೊಳ್ಳಲು ಆಗಲ್ಲ. ಇಲ್ಲಿನ ಜನ ದುಡ್ಡಿಗಾಗಿ ಸ್ವಾಭಿಮಾನವನ್ನು ಮಾರಿಕೊಳ್ಳೋದಿಲ್ಲ. ಕಾದು ನೋಡಿ, ನಿಮ್ಮ ದುಡ್ಡಿನ ರಾಜಕಾರಣಕ್ಕೆ ಈ ಚುನಾವಣೆ ಪಾಠವಾಗಲಿದೆ. ನನ್ನ ಕ್ಷೇತ್ರದ ಜನ ನನ್ನನ್ನು ಕೈಬಿಡಲ್ಲ ಎಂಬ ನಂಬಿಕೆ ಇದೆ. ಕ್ಷೇತ್ರದಲ್ಲಿ ಕಳೆದ 5 ವರ್ಷದ ಅವಧಿಯಲ್ಲಿ 300ರಿಂದ 350ಕೋಟಿ ವೆಚ್ಚದ ಕಾಮಗಾರಿಗಳು ನಡೆದಿವೆ. ಇದು ಗರ್ವದಿಂದ ಹೇಳಿಕೊಳ್ಳುವ ಮಾತಲ್ಲ. ಆದರೆ ಕೆಲಸ ಮಾಡಿರುವ ಹೆಮ್ಮೆ ನನಗಿದೆ ಎಂದರು.
ಸಮ್ಮಿಶ್ರ ಸರ್ಕಾರ ನಿರೀಕ್ಷೆ: ಈ ಬಾರಿಯ ಚುನಾವಣೆಯಲ್ಲಿ ಸಮ್ಮಿಶ್ರ ಸರ್ಕಾರ ಬರುವುದು ನಿಶ್ಚಿತ. ಕ್ಷೇತ್ರದಲ್ಲಿ 3-4 ದೊಡ್ಡ ಯೋಜನೆಗಳು ಇನ್ನೂ ಬಾಕಿ ಉಳಿದಿವೆ. ಮುಂದಿನ ಹಂತದಲ್ಲಿ ಅವುಗಳನ್ನು ಪೂರೈಸಬೇಕಿದೆ. ಪ್ರಸ್ತುತ ಬಿಜೆಪಿ ಸರ್ಕಾರದಲ್ಲಿ ಕಿತ್ತಾಟ ಇದ್ದಿರಬಹುದು ಆದರೆ ಅಭಿವೃದ್ಧಿ ಆಗಿದೆ ಎಂದರು.
ಏನೇನು ಕಾದಿದೆಯೋ ಗೊತ್ತಿಲ್ಲ: ಕ್ಷೇತ್ರಕ್ಕೆ ಕಾಲಿಟ್ಟಿರುವ ಹೊರಗಿನವರ ಅಬ್ಬರದ ಪರಿಣಾಮ ಬರುವ 28 ದಿನಗಳ ಅವಧಿಯಲ್ಲಿ ಇನ್ನು ಏನೇನು ನಡೆಯುತ್ತದೆಯೋ ಗೊತ್ತಿಲ್ಲ. ಕಚ್ಚಾಟದ ರಾಜಕಾರಣದಲ್ಲಿ ದೊಡ್ಡಬಳ್ಳಾಪುರದ ಶಾಂತಿ ಹಾಳಾಗುತ್ತಿದೆ. ಬಹುಶಃ ಮುಂದಿನ ದಿನಗಳಲ್ಲಿ ಈ ರಾಜಕೀಯ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರ ಕೊರತೆ ಕಾಡಬಹುದು. ಕ್ಷೇತ್ರದಲ್ಲಿ ರಾಮೇಗೌಡ, ಜಾಲಪ್ಪ, ವೆಂಕಟಾಚಲಯ್ಯ, ಕೃಷ್ಣಪ್ಪ ಆದಿಯಾಗಿ ಯಾರೂ ಶಾಂತಿ ಕದಡುವ ಕೆಲಸ ಮಾಡಿಲ್ಲ. ಆದರೆ ಈಗ ಬರುತ್ತಿರುವ ಕೆಲವರು ಅಖಾಡ ಪ್ರವೇಶದಲ್ಲೇ ಅಶಾಂತಿಯನ್ನು ಪರಿಚಯಿಸಿದ್ದಾರೆ ಎಂದ ಅವರು, ನಾನು ರೌಡಿಸಂ ಮಾಡಿಲ್ಲ, ಅಪರಾಧಿಗಳಿಗೆ ರಕ್ಷಣೆ ಕೊಡುವ ಸಣ್ಣತನ ಮೆರೆದಿಲ್ಲ. ಭ್ರಷ್ಟಾಚಾರ ಮತ್ತು ಹಗರಣ ಮುಕ್ತ ರಾಜಕಾರಣಿಯಾಗಿ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದೇನೆ. ಇದನ್ನು ಜನ ಗೌರವಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸಭೆಯಲ್ಲಿ ಜೆ.ನರಸಿಂಹಸ್ವಾಮಿ ಬೆಂಬಲಿಗರಾದ ತಾ.ಬಿಜೆಪಿ ಅಧ್ಯಕ್ಷ ಬಿ.ಸಿ.ನಾರಾಯಣಸ್ವಾಮಿ, ಎಪಿಎಂಸಿ ಅಧ್ಯಕ್ಷ ಟಿ.ವಿ.ಲಕ್ಷ್ಮೀನಾರಾಯಣ್, ಜಿ.ಪಂ ಉಪಾಧ್ಯಕ್ಷ ಎನ್.ಹನುಮಂತೇಗೌಡ, ಜಿ.ಪಂ ಸದಸ್ಯ ಎನ್.ಅರವಿಂದ್, ಎಪಿಎಂಸಿ ಉಪಾಧ್ಯಕ್ಷ ಕೆ.ಎಂ.ಕೃಷ್ಣಮೂರ್ತಿ, ತಾ.ಬಿಜೆಪಿ ಕಾರ್ಯದರ್ಶಿ ನಾಗರಾಜ್, ನಗರ ಬಿಜೆಪಿ ಅಧ್ಯಕ್ಷ ಗೋಪಿ, ಕಾರ್ಯದರ್ಶಿ ಡಿ.ಎಲ್.ಸತ್ಯನಾರಾಯಣ್, ಮಾಜಿ ನಗರಸಭಾ ಅಧ್ಯಕ್ಷ ಜೆ.ರಾಜೇಂದ್ರ, ಜಗದೀಶರೆಡ್ಡಿ, ಭೂ ಅಭಿವೃದ್ಧಿ ಬ್ಯಾಂಕ್‌ನ ಮುನಿರಾಮೇಗೌಡ, ಟಿಎಪಿಎಂಸಿಎಸ್ ಅಧ್ಯಕ್ಷ ಆಂಜನಪ್ಪ, ತಾ.ಪಂ ಮಾಜಿ ಉಪಾಧ್ಯಕ್ಷ ಗೋಪಾಲನಾಯಕ್, ಕೆ.ಮೋಹನಕುಮಾರ್, ಯಲ್ಲಪ್ಪ, ಪ್ರೇಂಕುಮಾರ್ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement