ಪಡಿತರ ಚೀಟಿ ವಿತರಣೆಯಲ್ಲಿ ಗಂಭೀರ ಲೋಪ
ಕ.ಪ್ರ.ವಾರ್ತೆ ದೊಡ್ಡಬಳ್ಳಾಪುರ ಏ.6
ಪಡಿತರ ಚೀಟಿಗಳನ್ನು ವಿತರಿಸುವಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಗಂಭೀರ ಲೋಪ ಎಸಗುತ್ತಿರುವುದು ಆಧಾರ ಸಹಿತ ಕಂಡುಬಂದಿದ್ದು ಈ ಬಗೆಯ ಲೋಪವನ್ನು ಕೂಡಲೇ ಸರಿಪಡಿಸಿಕೊಳ್ಳದಿದ್ದರೆ ಗಂಭೀರ ಹೋರಾಟ ರೂಪಿಸಬೇಕಾದೀತು ಎಂದು ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಕೆ ನೀಡಿದೆ.
ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ವೇದಿಕೆಯ ಅಧ್ಯಕ್ಷ ಬಿ.ಎಸ್.ಚಂದ್ರಶೇಖರ್, ತಾಲೂಕಿನಲ್ಲಿ ಪಡಿತರ ಚೀಟಿಗಳ ವಿತರಣೆ ನಡೆಯುತ್ತಿದೆ. ಸರ್ಕಾರದ ಆದೇಶದಲ್ಲಿ ಬಿಪಿಎಲ್ ಪಡಿತರ ಚೀಟಿ ಮಂಜೂರಾಗಿರುವ ಕುಟುಂಬಗಳಿಗೆ ಅಧಿಕಾರಿಗಳು ಎಪಿಎಲ್ ಎಂದು ಮುದ್ರಿಸಿ ವಿತರಣೆ ಮಾಡಿದ್ದಾರೆ.
ಕಂಪ್ಯೂಟರ್‌ನಲ್ಲಿ ದಾಖಲೆಗಳನ್ನು ಪರಿಶೀಲಿಸಿದರೆ ಆ ಕಾರ್ಡ್ ನಂಬರ್‌ಗಳಿಗೆ ಬಿಪಿಎಲ್ ಕಾರ್ಡ್ ಮಂಜೂರಾಗಿರುವುದು ಕಂಡು ಬಂದಿದೆ.
ಲಕ್ಷ್ಮೀನಾರಾಯಣಪ್ಪ (ಕಾರ್ಡ್ ನಂ.ಡಿಬಿಪಿಐ00125212) ಸರ್ಕಾರಿ ದಾಖಲೆ ಪ್ರಕಾರ ಬಿಪಿಎಲ್ ಇದೆ. ಆದರೆ ಎಪಿಎಲ್ ನೀಡಿದ್ದಾರೆ. ಅದೇ ರೀತಿ ಗೋವರ್ಧನಲಾಲ್ (ಕಾರ್ಡ್ ನಂ.ಡಿಬಿಪಿ24132296) ಕುಟುಂಬಕ್ಕೆ ಸಹ ಬಿಪಿಎಲ್‌ಗೆ ಬದಲಾಗಿ ಎಪಿಎಲ್ ಕಾರ್ಡ್ ನೀಡಿದ್ದಾರೆ. ಇದೇ ರೀತಿ ಹಲವು ದಾಖಲೆಗಳಿವೆ. ಈ ಮೂಲಕ ಎಪಿಎಲ್ ಅನ್ನು ಬಿಪಿಎಲ್ ಆಗಿ ಬದಲಾಯಿಸಿಕೊಡಲು ಮುಗ್ಧ ಜನರಿಂದ ಐನೂರರಿಂದ ಸಾವಿರ ರುಪಾಯಿವರೆಗೆ ವಸೂಲಿ ಮಾಡುವ ದಂಧೆ ಕೂಡ ನಡೆದಿದೆ ಎಂದು ಆರೋಪಿಸಿದರು.
ಉಳ್ಳವರಿಗೆ ಬಿಪಿಎಲ್ ಚೀಟಿಗಳು ಲಭ್ಯವಾಗುತ್ತಿದ್ದು, ನಿರ್ಗತಿಕರಿಗೆ ಎಪಿಎಲ್ ಚೀಟಿಗಳನ್ನು ವಿತರಿಸಲಾಗಿದೆ. ಅನೇಕ ಕಡೆ ಈ ರೀತಿಯಾಗಿ ನಡೆದ ದಾಖಲೆಗಳಿವೆ.
ಇದರಲ್ಲಿ ಅಧಿಕಾರಿಗಳು, ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗಳ ನಡುವಿನ ಒಳಒಪ್ಪಂದಗಳು ಪ್ರಮುಖ ಪಾತ್ರ ವಹಿಸುತ್ತಿದ್ದು ಕೂಡಲೇ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.
ಬಿಪಿಎಲ್ ಪಡಿತರ ಕಾರ್ಡಿನ ಬೆಲೆಗೆ ಬಿಡುಗಡೆಯಾಗುವ ಪಡಿತರ ಧಾನ್ಯಗಳನ್ನು ಕೆಲವರು ಈ ರೀತಿಯಾಗಿ ಕಾಳಸಂತೆ ವಹಿವಾಟಿಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.
ಕೂಡಲೇ ತಾಲೂಕಿನಲ್ಲಿ ನಡೆದಿರುವ ಈ ಬಗೆಯ ಅಕ್ರಮಗಳ ವಿರುದ್ಧ ಆಹಾರ ಇಲಾಖೆ ಎಚ್ಚೆತ್ತುಕೊಳ್ಳದಿದ್ದರೆ ಉಗ್ರಹೋರಾಟ ನಡೆಸಲಾಗುವುದು. ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಆಗ್ರಹಿಸಿದರು.
ಸಭೆಯಲ್ಲಿ ಕರವೇ ಮುಖಂಡರಾದ ಮನು, ಸೋಮಶೇಖರ್, ರವಿ ಮಾವಿನಕುಂಟೆ ಹಾಜರಿದ್ದರು