ಲಕ್ಷಾಂತರ ದೋಚಿದ್ದ 3 ಕಳ್ಳರ ಬಂಧನ
ಕನಕಪುರ: ಕನಕಪುರ ತಾಲೂಕು ಕೂನೂರು ಗ್ರಾಮದಲ್ಲಿ ಮನೆಯೊಂದಕ್ಕೆ ನುಗ್ಗಿ ಲಕ್ಷಾಂತರ ರು.ನಗದು ದೋಚಿದ್ದ ಮೂರುಮಂದಿ ಕಳ್ಳರನ್ನು ಕನಕಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಕೂನೂರು ಗ್ರಾಮದ ಪ್ರದೀಪ, ವಿನಯ ಹಾಗೂ ರವಿಕುಮಾರ್ ಎಂದು ತಿಳಿದುಬಂದಿದೆ.
ಕಳೆದ ವಾರ ಕೂನೂರಿನ ರಾಮಚಂದ್ರರಾಜೇ ಅರಸ್ ಎಂಬುವವರು ಮನೆಗೆ ಬೀಗ ಹಾಕಿಕೊಂಡು ಮದುವೆಯೊಂದಕ್ಕೆ ಹೋಗಿದ್ದಾಗ ಆರೋಪಿಗಳು ಮನೆಯ ಹಿಂಬಾಗಿಲನ್ನು ಒಡೆದು 1ಲಕ್ಷ 95 ಸಾವಿರ ನಗದು, ವಾಚ್, ಚಿನ್ನದ ಒಡವೆಯನ್ನು ಕದ್ದು ಹೊಗಿದ್ದರು. ಪ್ರಕರಣದ ತನಿಖೆ ನಡೆಸಿದ ಉಪನಿರೀಕ್ಷಕ ಹೇಮಂತಕುಮಾರ್ ನೇತೃತ್ವದ ತಂಡ ಶೀಘ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ನಗದು, ಒಡವೆ ವಶಪಡಿಸಿಕೊಂಡಿದ್ದಾರೆ. ದಾಳಿಯಲ್ಲಿ ಎಎಸ್‌ಐ ಸಿದ್ದೇಗೌಡ, ಈಶ್ವರ್, ಸಿಬ್ಬಂದಿಗಳಾದ ಗೋವರ್ಧನ್, ರೇವಣ್ಣ, ಲೋಕೇಶ್, ಚಂದ್ರು ಪಾಲ್ಗೊಂಡಿದ್ದರು.