ಕುರುಕ್ಷೇತ್ರದಲ್ಲಿ ಧರ್ಮಕ್ಕೆ ಜಯ ಖಚಿತ
ಕ.ಪ್ರ.ವಾರ್ತೆ ಸೂಲಿಬೆಲೆ ಏ.7
ಹೊಸಕೋಟೆ ವಿಧಾನ ಸಭಾ ಕ್ಷೇತ್ರಕ್ಕೆ ನಡೆಯುವ ಚುನಾವಣೆ ಈ ಭಾರಿ ಕುರುಕ್ಷೇತ್ರಕ್ಕೆ ಸಮಾನವಾಗಿದ್ದು, ಕುರುಕ್ಷೇತ್ರದಲ್ಲಿ ಧರ್ಮ ಅಂದರೆ ಪಾಂಡವರಿಗೆ (ಬಚ್ಚೇಗೌಡರು) ಜಯ ಖಚಿತ. ಅಧರ್ಮದಲ್ಲಿ ನಡೆದ ಕೌರವರಿಗೆ (ನಾಗರಾಜ್) ಸೋಲು ಗ್ಯಾರಂಟಿ. ಬಚ್ಚೇಗೌಡರು ಹೊಸಕೋಟೆ ಕ್ಷೇತ್ರದ ಅಭಿವೃದ್ಧಿಗೆ ದುಡಿದ್ದಿದ್ದಾರೆ ಎಂದು ನಿಮಗೆ ಅನಿಸಿದರೆ ಮತ ನೀಡಿ. ಅಧರ್ಮದ ಕಡೆ ಎಂದಿಗೂ ಹೋಗಬೇಡಿ ಎಂದು ಅಪ್ಪ ಬಚ್ಚೇಗೌಡರ ಪರ ಮಗ ಯುವ ಮುಖಂಡ ಶರತ್ ಬಚ್ಚೇಗೌಡ ಬ್ಯಾಟಿಂಗ್ ಮಾಡಿದ್ದಾರೆ.
ನಂದಗುಡಿ ಹೋಬಳಿಯ ಹೆತ್ತಕ್ಕಿಯಲ್ಲಿ ನಡೆದ ನಳದಮಯಂತಿ ಪೌರಾಣಿಕ ನಾಟಕದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಪೌರಾಣಿಕ ನಾಟಕಗಳ ಹಳ್ಳಿಗರ ಕಲಾ ಪ್ರತಿಭೆಯನ್ನು ಅನಾವರಣಗೊಳಿಸಲು ಉತ್ತಮ ವೇದಿಕೆಗಳಾಗಿವೆ. ಸುಗ್ಗಿ ಕಾಲ ಮುಗಿದ ನಂತರ ಮನರಂಜನೆಗಾಗಿ ಆಯೋಜಿಸುವ ನಾಟಕಗಳು ಅತ್ಯಂತ ಉಪಯೋಗಕಾರಿಯಾಗಿದೆ. ನಾಟಕಗಳು ಹಿಂದೂ ಧರ್ಮದ ಬಗ್ಗೆ ಜನರಿಗೆ ಸಂದೇಶಗಳನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು. ಪೋಟಾಷಿಂ ಇಂಡಿಯಾ ಲಿ.ನಿರ್ದೇಶಕ ಬಿ.ಎನ್. ಗೋಪಾಲಗೌಡ ಮಾತನಾಡಿ, ಗ್ರಾಮೀಣ ಸೊಗಡಿನ ಸಾರವನ್ನು ಸಾರುವ ನಾಟಕಗಳ ಬೆಳವಣಿಗೆಗೆ ಸರ್ಕಾರ ನೀಡುತ್ತಿರುವ ಪ್ರೋತ್ಸಾಹವನ್ನು ಬಳಿಸಿಕೊಳ್ಳಬೇಕು ಎಂದರು.ಇದೇ ಸಂದರ್ಭದಲ್ಲಿ ಹಲವು ಕಲಾವಿದರನ್ನು ಸನ್ಮಾನಿಸಲಾಯಿತು ಮುಖಂಡರಾದ ಬಿ.ವಿ. ರಾಜಶೇಖರ್ ಗೌಡ, ಬೈರೇಗೌಡ, ಸುಬ್ಬರಾಜ್, ಬಸವರಾಜ್, ಪಿಳ್ಳಪ್ಪ ಸೇರಿದಂತೆ ಹಲವಾರು ಮುಖಂಡರು ಪಾಲ್ಗೊಂಡಿದ್ದರು.