ಆರೋಪಿಸುವ ಮುನ್ನ ವಾಸ್ತವ ಅರಿಯಿರಿ
ಕ.ಪ್ರ. ವಾರ್ತೆ ದೊಡ್ಡಬಳ್ಳಾಪುರ ಏ.8
ಜೆಡಿಎಸ್ ಸಿದ್ಧಾಂತ ನಂಬಿ ಬಿಜೆಪಿ ಮತ್ತು ಕಾಂಗ್ರೆಸ್ನ ಮುಖಂಡರು ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದು ಸ್ವಾಗತಾರ್ಹ ಎಂದು ಮಾಜಿ ಸಚಿವ ಸಿ.ಚನ್ನಿಗಪ್ಪ ಹೇಳಿದರು.
ಇಲ್ಲಿನ ಜೆಡಿಎಸ್ ಚುನಾವಣಾ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.ನಾನೂ ದೊಡ್ಡಬಳ್ಳಾಪುರದವನೇ. ನಾನು ಹೊರಗಿನಿಂದ ಬಂದವನು ಎಂದು ಕೆಲವರು ಸ್ವಾರ್ಥದ ಹೇಳಿಕೆ ನೀಡುತ್ತಿದ್ದಾರೆ. ಅಶಾಂತಿ ಸೃಷ್ಟಿಸುವ ಗುಣ ನನ್ನದಲ್ಲ. ಇನ್ನೊಬ್ಬರ ಬಗ್ಗೆ ಅಪಪ್ರಚಾರ ಮಾಡುವುದನ್ನು ಮೊದಲು ಬಿಡಬೇಕು. ಕ್ಷುಲ್ಲಕ ಆರೋಪಗಳನ್ನು ಸಾಬೀತು ಮಾಡುವ ಶಕ್ತಿಯಿದ್ದರೆ ಸಾಬೀತು ಮಾಡಲಿ ಎಂದರು.
ಇದೇ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದ ವೀರಶೈವ ಮುಖಂಡ ಎಸ್.ದಯಾನಂದ್, ತಾಲೂಕು ವೀರಶೈವ ಮಹಾಸಭಾದ ಅಧ್ಯಕ್ಷ ವಿಶ್ವನಾಥ್, ಮುಸ್ಲಿಂ ಅಸೋಸಿಯೇಷನ್ನ ಕಾರ್ಯದರ್ಶಿ ಖಾದರ್, ಮುಖಂಡರಾದ ಸಿಬ್ಗತ್, ಮುಷೀರ್, ಭಾಸ್ಕರ್ ಸೇರಿದಂತೆ ಅನೇಕರು ಜೆಡಿಎಸ್ಗೆ ಸೇರ್ಪಡೆಯಾದರು.
ನಂತರ ಮಾತನಾಡಿದ ಅವರು, ಕುಮಾರಸ್ವಾಮಿ ಅವರ 20 ತಿಂಗಳ ಪ್ರಗತಿಪರ ಆಡಳಿತ, ಚನ್ನಿಗಪ್ಪ ಮತ್ತು ಚುಂಚೇಗೌಡರ ನಾಯಕತ್ವದಲ್ಲಿ ನಂಬಿಕೆಯಿಟ್ಟು ಇಂದು ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಜೆಡಿಎಸ್ನ್ನು ಗೆಲವಿನತ್ತ ಕೊಂಡೊಯ್ಯುವುದು ನಮ್ಮ ಗುರಿ. ಹಾಲಿ ಶಾಸಕರು ಅನೇಕ ಭರವಸೆಗಳನ್ನು ಈಡೇರಿಸಿಲ್ಲ. ಹೀಗಾಗಿ ಬದಲಾವಣೆ ಅನಿವಾರ್ಯ ಎಂದರು. ಪಕ್ಷದ ತಾ.ಅಧ್ಯಕ್ಷ ಗೋವಿಂದರಾಜು ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.