ಕೆಎಸ್‌ಆರ್‌ಟಿಸಿ ವಿರುದ್ಧ ವಿದ್ಯಾರ್ಥಿ, ನಾಗರಿಕರ ಆಕ್ರೋಶ
ಕ.ಪ್ರ.ವಾರ್ತೆ, ದೊಡ್ಡಬಳ್ಳಾಪುರ, ಏ.8
ದೊಡ್ಡಬಳ್ಳಾಪುರ ಮತ್ತು ಬೆಂಗಳೂರು ನಡುವಿನ 38 ಕಿ.ಮೀ ಪ್ರಯಾಣ ಅಕ್ಷರಶಃ ನರಕಸದೃಶವಾಗಿ ಮಾರ್ಪಟ್ಟಿದೆ. ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ಬೆಂಗಳೂರಿಗೆ ಪ್ರಯಾಣಿಸುವ ವಿದ್ಯಾರ್ಥಿಗಳು, ಸಾರ್ವಜನಿಕರು ಕೆಎಸ್‌ಆರ್‌ಟಿಸಿ ಬಸ್‌ಗಳಿಲ್ಲದೆ ಪರದಾಡುವ ಸ್ಥಿತಿ ಸಾಮಾನ್ಯವಾಗಿದೆ. ಇದರಿಂದ ಕೆರಳಿದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಸೋಮವಾರ ಇಲ್ಲಿನ ಹಳೇ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು. ನಂತರ ವಿಭಾಗ ವ್ಯವಸ್ಥಾಪಕರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ ವಿದ್ಯಾರ್ಥಿಗಳು ಕೆಎಸ್‌ಆರ್‌ಟಿಸಿ ದೊಡ್ಡಬಳ್ಳಾಪುರದಲ್ಲಿ ಜೀವಂತ ಶವವಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಸೂಕ್ತ ಬಸ್‌ಗಳ ವ್ಯವಸ್ಥೆ ಇಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಮುಖ್ಯವಾಗಿ ಬೆಳಗ್ಗೆ 8 ಗಂಟೆಯಿಂದ 10 ಗಂಟೆಯವರೆಗೆ ಮತ್ತು ಸಂಜೆ 4 ಗಂಟೆಯ ನಂತರ ಬಸ್ಸುಗಳಿಗೆ ಕಾದು ಕುಳಿತುಕೊಂಡರೂ ಬಸ್ಸುಗಳು ನಿಲ್ದಾಣ ಸುಳಿಯುವುದಿಲ್ಲ. ಬರುವ ಒಂದೋ ಎರಡೋ ಬಸ್ಸಿಗೆ ಹತ್ತು ಬಸ್ಸಿಗಾಗುವಷ್ಟು ಜನ ಕಾದಿರುತ್ತಾರೆ. ಇಂತಹ ಸಂದರ್ಭದಲ್ಲಿ ನಿರ್ವಾಹಕರು ವಿದ್ಯಾರ್ಥಿ ಪಾಸುಗಳನ್ನು ಹೊಂದಿರುವವರತ್ತ ನಿರ್ಲಕ್ಷ್ಯದ ನೋಟ ಬೀರುವ ಸ್ಥಿತಿ ಸಾಮಾನ್ಯವಾಗಿದೆ. ಪಾಸು ಹೊಂದಿರುವವರೆಂದರೆ ಸಿಬ್ಬಂದಿಗೆ ದಿವ್ಯ ನಿರ್ಲಕ್ಷ್ಯ ಎಂದು ಆರೋಪಿಸಿದರು.
ಜೊತೆಗೆ ಡಕೋಟ ಬಸ್ಸುಗಳಿಂದ ತುಂಬಿರುವ ದೊಡ್ಡಬಳ್ಳಾಪುರ ಕೆಎಸ್‌ಆರ್‌ಟಿಸಿ ಘಟಕದಿಂದ ಬರುವ ಬಸ್ಸುಗಳು ಬೆಂಗಳೂರು ತಲುಪಲು ಕನಿಷ್ಠ 2 ಗಂಟೆ ಅವಧಿ ಬೇಕು. 38 ಕಿ.ಮೀ ಪ್ರಯಾಣ 100 ಕಿ.ಮೀ ಪ್ರಯಾಣ ಮಾಡಿದಷ್ಟು ಆಯಾಸ ತಂದೊಡ್ಡುತ್ತಿದೆ. ಜೊತೆಗೆ ತಡೆರಹಿತ ಮತ್ತು ಕೆಂಪು ಬೋರ್ಡಿನ ಬಸ್ಸುಗಳು ಬರುವುದೇ ಇಲ್ಲ. ಬಿಎಂಟಿಸಿಗಿಂತಲೂ ಹೆಚ್ಚಿನ ಸ್ಟಾಪ್‌ಗಳನ್ನು ಕೆಎಸ್‌ಆರ್‌ಟಿಸಿಯವರು ಕೊಡುತ್ತಾರೆ. 28 ರು. ತೆತ್ತರೂ ಸರಿಯಾದ ಸಮಯಕ್ಕೆ ಬೆಂಗಳೂರು ಸೇರುವ, ಬೆಂಗಳೂರಿನಿಂದ ದೊಡ್ಡಬಳ್ಳಾಪುರಕ್ಕೆ ಬರುವ ವ್ಯವಸ್ಥೆಯೇ ಇಲ್ಲ. ಕೂಡಲೇ ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ಈ ಕೂಡಲೇ ಬೆಳಗ್ಗೆ 8ರಿಂದ 10 ಗಂಟೆಯ ಅವಧಿಯಲ್ಲಿ ದೊಡ್ಡಬಳ್ಳಾಪುರ ಬಸ್ ನಿಲ್ದಾಣದಲ್ಲಿ ಮತ್ತು ಸಂಜೆ 4 ಗಂಟೆಯ ನಂತರ ಬೆಂಗಳೂರಿನ ಕಾವೇರಿ ಭವನ ಸ್ಟಾಪ್‌ನಲ್ಲಿ ಕೆಎಸ್‌ಆರ್‌ಟಿಸಿ ಬಸ್ಸುಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಅತ್ತ ಬಿಎಂಟಿಸಿಯೂ ಇಲ್ಲದೆ ಇತ್ತ ಕೆಎಸ್‌ಆರ್‌ಟಿಸಿಯೂ ಇಲ್ಲದೆ ಪರದಾಡುವ ಸ್ಥಿತಿಯನ್ನು ಕೂಡಲೇ ಕಡೆಗಾಣಿಸಬೇಕು ಎಂದು ಆಗ್ರಹಿಸಿ ವಿಭಾಗ ನಿಯಂತ್ರಕರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಪ್ರತಿಕ್ರಿಯಿಸಿದ ಸಾರಿಗೆ ಡಿಸಿ ಪ್ರಕಾಶ್, ಮನವಿಯನ್ನು ಕೂಡಲೇ ಮೇಲಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
ಭರವಸೆ ಧೀರರು
ಸಾರಿಗೆ ಸಚಿವ ಆರ್.ಅಶೋಕ್ ದೊಡ್ಡಬಳ್ಳಾಪುರಕ್ಕೆ ಭೇಟಿಯಿತ್ತಾಗಲೆಲ್ಲಾ ನಾಳೆಯಿಂದಲೇ 10-15 ಹೊಸ ಬಸ್ಸುಗಳನ್ನು ಬಿಡುವುದಾಗಿ ಬರೀ ರೈಲು ಬಿಡುತ್ತಿದ್ದಾರೆ. ಭರವಸೆಯ ಧೀರರಾಗಿ ಕಾಣುತ್ತಿರುವ ಅವರಿಗೆ ನಿಜವಾದ ಜನಪರ ಕಾಳಜಿ ಇಲ್ಲ. ಸ್ಥಳೀಯ ಶಾಸಕರು ಕೂಡ ಪ್ರಭಾವಿಗಳ ಮೇಲೆ ಒತ್ತಡ ಹೇರಿ ಕಾರ್ಯಸಾಧನೆ ಮಾಡುವ ಉತ್ಸಾಹ ತೋರುತ್ತಿಲ್ಲ ಎಂದು ಆರೋಪಿಸಿದರು.