ನ್ಯಾಯಯುತ ಮತದಾನಕ್ಕೆ ಆದ್ಯತೆ: ಎಚ್. ನಟರಾಜ್
ಕ.ಪ್ರ.ವಾರ್ತೆ ಸೂಲಿಬೆಲೆ ಏ.8-
ಹೊಸಕೋಟೆ ತಾಲೂಕಿನಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ಡಾ. ಎಚ್.ನಟರಾಜ್ ತಿಳಿಸಿದರು.
ಇಲ್ಲಿನ ವಿವೇಕಾನಂದ ಪ್ರೌಢಶಾಲೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಆವರಣದ ಕೊಠಡಿಗಳಲ್ಲಿ ಮೇ 5ರಂದು ನಡೆಯಲಿರುವ ಹೊಸಕೋಟೆ ವಿಧಾನಸಭಾ ಕ್ಷೇತ್ರ ಚುನಾವಣೆಯ ಹಿನ್ನೆಲೆಯಲ್ಲಿ ಮತಗಟ್ಟೆ ಪ್ರದೇಶಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು.
ತಹಶೀಲ್ದಾರ್ ಮಲ್ಲಿಕಾರ್ಜುನ್ ಮಾತನಾಡಿ, ಸೂಲಿಬೆಲೆಯಲ್ಲಿ ಕಳೆದ ಸಾರಿ ಇದ್ದ ಮತಗಟ್ಟೆಗಳ ಸಂಖ್ಯೆಗಿಂತ ಈ ಬಾರಿ ಹೆಚ್ಚಾಗಿದೆ. ಸುಸೂತ್ರವಾಗಿ ಮತದಾನ ನಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಮತದಾರರು ಯಾವುದೇ ಭಯಕ್ಕೆ ಒಳಗಾಗದೇ ಮುಕ್ತವಾಗಿ ಮತದಾನ ಮಾಡುವಂತೆ ಮನವಿ ಮಾಡಿದರು.
ಸೂಲಿಬೆಲೆ ಹೋಬಳಿ ವಿಶೇಷ ಜಾಗೃತಿದಳದ ಅಧಿಕಾರಿ ನಾಗರಾಜ್ ಮಾತನಾಡಿ, ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಪರಿಶೀಲನೆ ಮಾಡಿ ಅಗತ್ಯವಿರುವ ಕಡೆ ಸೌಲಭ್ಯ ಒದಗಿಸಲಾಗುವುದು. ಹೋಬಳಿಯ 45 ಮತಗಟ್ಟೆಗಳಿಗೆ ಭೇಟಿ ನೀಡಿ ತನಿಖೆ ಮಾಡಲಾಗುವುದು. ವಿಶೇಷ ಜಾಗೃತದಳವನ್ನು ಹೋಬಳಿಗೊಂದರಂತೆ ಸ್ಥಾಪನೆ ಮಾಡಿಲಾಗಿದೆ. ಚುನಾವಣೆಗೆ ಸಂಬಂಧಪಟ್ಟಂತೆ ದೂರುಗಳಿದ್ದಲ್ಲಿ ಮೊ.9845494060 ಸಂಪರ್ಕಿಸಬಹುದು ಎಂದರು. ಜಾಗೃತಿ ದಳದ ತಂಡದಲ್ಲಿನ ಅಧಿಕಾರಿಗಳಾದ ಪಿಡಿಒ ನಾಗರಾಜ್, ದಿನೇಶ್, ಚಿದಾನಂದ್, ಸುಬ್ರಹ್ಮಣ್ಯ, ಮುನಿಕೃಷ್ಣಪ್ಪ, ಶಿಕ್ಷಕ ವೆಂಕಟೇಶ್ ಇದ್ದರು.