ಕೈನಲ್ಲಿ ಕಾಡಿ ಬೇಡಿ ಟಿಕೆಟ್ ಕೇಳುವ ಪದ್ಧತಿ ಇಲ್ಲ
ಕ.ಪ್ರಭ. ವಾರ್ತೆ ಮಾಗಡಿ ಏ.9-
ಕಾಂಗ್ರೆಸ್ನಲ್ಲಿ ಕಾಡಿ ಬೇಡಿ ಟಿಕೆಟ್ ಕೇಳುವ ಪದ್ಧತಿ ಇಲ್ಲ, ಯೋಗ್ಯರಿಗೆ ಟಿಕೆಟ್ ಸಿಗುತ್ತದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಎ.ಮಂಜು ಹೇಳಿದರು.
ಅವರು ಆಗಲಕೋಟೆ ಹ್ಯಾಂಡ್ಪೋಸ್ಟ್ ಬಳಿ ಮತ್ತೀಕರೆ ಮತ್ತು ಸಾತನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ತನ್ನದೆ ಆದ ಇತಿಹಾಸವಿದೆ. ಪಕ್ಷದ ತತ್ವ, ಸಿದ್ಧಾಂತಗಳಿವೆ. ಹೈಕಮಾಂಡ್ ಇದೆ. ನಾವೇನಾದರು ತಪ್ಪು ಮಾಡಿದರೆ ಹೈಕಮಾಂಡ್ ಎಚ್ಚರಿಕೆಯ ಚಾಟಿ ಏಟು ಬೀಸುತ್ತದೆ ಎಂದರು.
ಇದೇ ರೀತಿ ಜೆಡಿಎಸ್ ನಾಯಕ ಎಚ್.ಡಿ.ದೇವೇಗೌಡರಾಗಲಿ, ಎಚ್.ಡಿ. ಕುಮಾರಸ್ವಾಮಿಯಾಗಲಿ ಕ್ಷೇತ್ರದ ಶಾಸಕ ಎಚ್.ಸಿ. ಬಾಲಕೃಷ್ಣ ಅವರಿಗೆ ಚಾಟಿ ಏಟು ನೀಡಿದ್ದರೆ ಕ್ಷೇತ್ರದಲ್ಲಿ ಬಹುಕೋಟಿ ಹಗರಣ ನಡೆಯುತ್ತಿರಲಿಲ್ಲ. ಚಾಟಿ ಏಟು ಬೀಳದಿದ್ದ ಕಾರಣ ಕ್ಷೇತ್ರವನ್ನ ಗುಡಿಸಿ ಗುಂಡಾರ ಮಾಡಿ ಆಸ್ತಿ ಮಾಡಿದ್ದೇ ಎಚ್.ಸಿ. ಬಾಲಕೃಷ್ಣ ಅವರ ಭಾರಿ ಸಾಧನೆಯಾಗಿದೆ. ಇವರ ದುರಾಡಳಿತ, ವಂಚನೆ, ಅನ್ಯಾಯದಿಂದ ಅನ್ನದಾತ ರೈತರು ಕಷ್ಟದಿಂದ ಜೀವಿಸಬೇಕಾದ ಪರಿಸ್ಥಿತಿಯನ್ನು ಕ್ಷೇತ್ರದಲ್ಲಿ ತಂದೊಡ್ಡಿದ್ದಾರೆ. ಈಗ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಾ ವ್ಯಕ್ತಿಗತ ತೇಜೋವಧೆ ಮಾಡುವ ಮೂಲಕ ಜಾತಿ ರಾಜಕಾರಣ ಮಾಡಲು ಹೊರಟಿದ್ದಾರೆ ಎಂದು ಜೆಡಿಎಸ್ ವಿರುದ್ಧ ಎ.ಮಂಜು ಹರಿಹಾಯ್ದರು.
ಎಚ್ಡಿಕೆ ಸಿಎಂ ಆಗಲ್ಲ: ಅಧಿಕಾರ ಇದ್ದಾಗ ಹೇಮಾವತಿ ನೀರಾವರಿ ಯೋಜನೆ ಬಗ್ಗೆ ಕಿಂಚಿತ್ತೂ ಚಿಂತಿಸದೆ, ಈಗ ಎಚ್.ಡಿ.ಕುಮಾರಸ್ವಾಮಿ ಸಿಎಂ ಆದರೆ ನಾನು ಪ್ರಭಾವಿ ಮಂತ್ರಿಯಾಗುತ್ತೇನೆ ಎನ್ನುವ ಬಾಲಕೃಷ್ಣ, ಆಗ ಹೇಮಾವತಿ ನೀರಾವರಿ ಯೋಜನೆ ತರುತ್ತೇನೆ ಎನ್ನುತ್ತಾರೆ. ಎಚ್ಡಿಕೆ ಸಿಎಂ ಆಗಲ್ಲ, ಇವರು ಮಂತ್ರಿಯೂ ಆಗಲ್ಲ. ಇವರೇನು ಜಿಲ್ಲೆಯನ್ನ ಗುತ್ತಿಗೆ ಪಡೆದಿದ್ದಾರೆಯೇ ಎಂದು ಎ.ಮಂಜು ಟೀಕಾ ಪ್ರಹಾರ ನಡೆಸಿದರು. ಸ್ವಾಭಿಮಾನಿ ಮತದಾರರು ಸ್ಥಳೀಯ ಪುರಸಭೆ ಚುನಾವಣೆಯಲ್ಲಿ ಬದಲಾವಣೆ ತರುವ ಮೂಲಕ ಕ್ಷೇತ್ರಕ್ಕೆ ಉತ್ತಮ ಸಂದೇಶ ನೀಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಬಿರುಗಾಳಿ ಬೀಸಿದ್ದು, ಕ್ಷೇತ್ರದಲ್ಲಿಯೂ ನನಗೆ ಮತ ನೀಡುವ ಮೂಲಕ ಗೆಲ್ಲಿಸಲು ಮತದಾರರು ಮನಸ್ಸು ಮಾಡಿದ್ದಾರೆ. ಕಳೆದ ಚುನಾವಣೆಯಲ್ಲಿ ಕ್ಷೇತ್ರದಲ್ಲಿ 70 ಸಾವಿರ ಬಾಲಕೃಷ್ಣ ವಿರೋಧಿ ಮತಗಳಿದ್ದವು. ಈ ಬಾರಿ 1 ಲಕ್ಷಕ್ಕೂ ಹೆಚ್ಚಿನ ಮತಗಳು ಕಾಂಗ್ರೆಸ್ ಮತಗಳಾಗಿದ್ದು, ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಲು ಸಂಕಲ್ಪ ಮಾಡಿದ್ದಾರೆ. ಮೇ 5 ರಂದು ಕ್ಷೇತ್ರದ ಮತದಾರರು ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡುವ ಮೂಲಕ ಐತಿಹಾಸಿಕ ತೀರ್ಪು ನೀಡಲಿದ್ದಾರೆ ಎಂದು ಎ.ಮಂಜು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ಗೆ ಸೇರ್ಪಡೆ: ಜಿ.ಪಂ. ಮಾಜಿ ಅಧ್ಯಕ್ಷ ನರಸಿಂಹಮೂರ್ತಿ ಕ್ಷೇತ್ರದ ಪ್ರತಿ ಬೂತ್ಗಳಲ್ಲೂ 25 ಮಂದಿ ತಂಡ ಕೆಲಸ ಮಾಡುವ ಮೂಲಕ ಮತ ಹಾಕಿಸಬೇಕಿದೆ ಎಂದರು. ಇದೇ ವೇಳೆ ವಿಪಕ್ಷಗಳ ಹತ್ತಾರು ಮುಖಂಡರು ಎ.ಮಂಜು ಸಮ್ಮುಖದಲ್ಲಿ ಕಾಂಗ್ರೆಸ್ಗೆ ಸೇರ್ಪಡೆಗೊಂಡರು.
ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆ.ಎಚ್.ಕೃಷ್ಣಮೂರ್ತಿ, ಯುವ ಕಾಂಗ್ರೆಸ್ ಮುಖಂಡ ನಟರಾಜ್, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಹಾಗೂ ಪುರಸಭಾ ಸದಸ್ಯ ಎಂ.ಎನ್. ಮಂಜು, ಮಾರೇಗೌಡ, ಗೋಪಾಲ್, ಮೂರ್ತಿ, ವೆಂಕಟರಮಣಪ್ಪ, ಅಶೋಕ್, ಆನಂದ್, ಕುನೇಗೌಡ, ಚಲುವಯ್ಯ, ಮಂಜುಳಮ್ಮ ಇತರರು ಇದ್ದರು.