ಪ್ರಜಾಪ್ರಭುತ್ವ ಮೌಲ್ಯದ ರಕ್ಷಣೆ ನಮ್ಮೆಲ್ಲರ ಹೊಣೆ...
ಕ.ಪ್ರ. ವಾರ್ತ್ಣೆ ದೊಡ್ಡಬಳ್ಳಾಪುರ ಏ.9
ಪ್ರಾಮಾಣಿಕ ಮತ್ತು ಪಾರದರ್ಶಕ ಆಯ್ಕೆಗೆ ಜನ ಒತ್ತು ನೀಡಬೇಕಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮ ಸಂವಿಧಾನ ನಮಗೆ ನೀಡಿರುವ ಪರಮೋಚ್ಚ ಅಧಿಕಾರವಾದ ಮತದಾನ ಇಂದು ಬಂಡವಾಳಶಾಹಿ ಕೈಗೊಂಬೆಯಾಗಿ ಮಾರಾಟದ ವಸ್ತುವಾಗಿರುವುದು ವಿಷಾದನೀಯ ಎಂದು ಪತ್ರಕರ್ತ ಕೆ.ವೆಂಕಟೇಶ್ ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಮಂಗಳವಾರ ನಡೆದ ಮತದಾರರ ಜಾಗೃತಿ ಜಾಥಾ ಕಾರ್ಯಕ್ರಮವನ್ನು ತಾಲೂಕು ಕಚೇರಿ ವೃತ್ತದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವ ಎಂಬುದು ಕೇವಲ ಮತದಾನಕ್ಕಷ್ಟೇ ಸೀಮಿತವಾಗಿರುವುದು ದುರಂತ. ಓಟು ಕೊಡುವ ಮತದಾರನಿಗೆ ಎಲ್ಲ ಹಂತಗಳಲ್ಲಿ ದೇಶದ ಪ್ರಗತಿ ಮತ್ತು ಮುನ್ನಡೆಗೆ ಪೂರಕವಾಗಿ ಪ್ರಶ್ನಿಸುವ ಅಧಿಕಾರ ಕೂಡ ಇದೆ. ಪಟ್ಟಭದ್ರಹಿತಾಸಕ್ತಿಗಳ ಮೂಲಕ ಪ್ರಜಾಪ್ರಭುತ್ವದ ಅರ್ಥವನ್ನೇ ಬುಡಮೇಲು ಮಾಡುವ ಹುನ್ನಾರಗಳು ದೇಶದಲ್ಲಿ ನಡೆಯುತ್ತಿರುವುದು ಆತಂಕಕಾರಿ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ತಾಲೂಕು ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಹ.ರಾಮಕೃಷ್ಣ, ಕನ್ನಡಪಕ್ಷದ ತಾ.ಅಧ್ಯಕ್ಷ ಸಂಜೀವನಾಯಕ್, ಕಾರ್ಯದರ್ಶಿ ಡಿ.ಪಿ.ಆಂಜನೇಯ, ಕರವೇ ಉಪಾಧ್ಯಕ್ಷ ಬಷೀರ್, ಪ್ರಧಾನ ಕಾರ್ಯದರ್ಶಿ ರಾಜಘಟ್ಟ ರವಿ, ಮುಖಂಡರಾದ ಪು.ಮಹೇಶ್ ಮತ್ತಿತರರು ಸೇವಾ ಕ್ಷೇತ್ರವಾಗಿರಬೇಕಾದ ರಾಜಕಾರಣ ಇಂದು ವ್ಯವಹಾರದ ಕ್ಷೇತ್ರವಾಗಿದೆ. ಜನಭಿಪ್ರಾಯ ಪಡೆದು ಜನಸೇವೆ ಮಾಡಬೇಕಿದ್ದ ನಾಯಕರು ಈಗ ಬಂಡವಾಳ ಹೂಡಿಕೆ ಮಾಡಿ ಆಯ್ಕೆಯಾಗುತ್ತಾರೆ. ನಂತರ ಹೂಡಿಕೆಯಾದ ಬಂಡವಾಳಕ್ಕೆ ಪೂರಕವಾಗಿ ಲಾಭದ ನಿರೀಕ್ಷೆಗಳನ್ನಿಟ್ಟುಕೊಂಡೇ ಕೆಲಸ ಮಾಡುತ್ತಾರೆ. ಹೀಗಿರುವಾಗ ರಾಜಕಾರಣದ ಪಾವಿತ್ರ್ಯತೆ ಮತ್ತು ಸೇವಾ ಕ್ಷೇತ್ರದ ನೈಜ ಕಾಳಜಿ ಮರೆಯಾಗಿದೆ. ಈ ಹಂತದಲ್ಲಿ ದೇಶದ ಪ್ರತಿಯೊಬ್ಬ ನಾಗರಿಕರೂ ಚಿಂತಿಸಬೇಕು ಎಂದರು.
ಜಾಗರೂಕತೆ ಅಗತ್ಯ: ಈ ಸಂದರ್ಭದಲ್ಲಿ ಜಾಗರೂಕತೆಯಿಂದ ಮತದಾನ ಮಾಡಬೇಕಿದೆ. ಹಣ, ಹೆಂಡ, ಜಾತಿ, ವರ್ಗಗಳೇ ಪ್ರಾಬಲ್ಯ ಮೆರೆಯುತ್ತಿರುವ ಸಂದರ್ಭದಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆಯ ಮೌಲ್ಯಗಳನ್ನು ಎತ್ತಿ ಹಿಡಿಯಬೇಕಾದ ಅನಿವಾರ್ಯತೆ ನಮಗಿದೆ. ಅಭಿವೃದ್ಧಿ ಮುಖವಾಡದಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಅಲ್ಲಗೆಳೆಯಬೇಕಾದ ಅವಶ್ಯಕತೆ ಎಲ್ಲ ಮತದಾರರಿಗೂ ಇದೆ. ಈ ಹಿನ್ನೆಲೆಯಲ್ಲಿ ಕಡ್ಡಾಯ ಮತದಾನ, ಭ್ರಷ್ಟಾಚಾರ ನಿರ್ಮೂಲನೆ, ಪಾರದರ್ಶಕ ಆಡಳಿತ, ಯೋಗ್ಯರ ಆಯ್ಕೆ ನಮ್ಮದಾಗಬೇಕು ಎಂದರು.
ಕರವೇ ಮುಖಂಡ ಕೇಶವ, ಅಮ್ಮು, ಪತ್ರಿಕಾ ಸಂಚಾಲಕ ರಮೇಶ್, ಹಮಾಮ್ ಘಟಕದ ಚಂದ್ರು,ಪ್ರಕಾಶ್, ನವೀನ್, ಸೊಣ್ಣಮಾರನಹಳ್ಳಿ ಘಟಕದ ಮಂಜು, ವೇಣು, ಆನಂದ್, ಪಾಲನಜೋಗಿಹಳ್ಳಿ ಘಟಕ, ರಾಜಘಟ್ಟ ಘಟಕದ ಮಹೇಶ್, ವಿಶ್ವ, ಹಮಾಮ್ ಘಟಕ ಸೇರಿದಂತೆ ಅನೇಕ ಘಟಕಗಳ ಪದಾಧಿಕಾರಿಗಳು, ಮುಖಂಡರು ಹಾಜರಿದ್ದರು. ತಾಲೂಕು ಕಚೇರಿ ವೃತ್ತದಿಂದ ಸಿದ್ಧಲಿಂಗಯ್ಯ ವೃತ್ತದವರೆಗೆ ಜಾಥಾ ಕಾರ್ಯಕ್ರಮ ನಡೆಯಿತು.