ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಬೊಮ್ಮನಹಳ್ಳಿಯಲ್ಲಿ ನೀರು, ನಾಯಕರಿಗೆ ಬರ

Mainashree
Updated On : 10 Apr 2013, 12:04 pm

ಹೆಬ್ಬಗೋಡಿ: ರಾಜ್ಯದಲ್ಲಿ ನೀರಿಗೆ ಬರ ಉಂಟಾಗಿ ಸಾಕಷ್ಟು ದಿನಗಳೇ ಕಳೆದಿದೆ. ನಗರದ ಬೊಮ್ಮನಹಳ್ಳಿಯಲ್ಲಿಯೂ ನೀರಿಗೆ ಹಾಹಾಕಾರ ಇದ್ದರೂ, ಜಲಮಂಡಳಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇದಕ್ಕೆ ಸ್ಪಷ್ಟ ಹಾದಿ ಹುಡುಕಿಕೊಳ್ಳದೆ ಕಾಲ ಕಳೆಯುತ್ತಿರುವಂತಿದೆ.
ಬೊಮ್ಮನಹಳ್ಳಿಯ ಸ್ಥಳೀಯ ಜನಪ್ರತಿನಿಧಿಗಳು ಸುತ್ತಮುತ್ತಲ ಪ್ರದೇಶಗಳ ನೀರಿನ ಅವಶ್ಯಕತೆಯನ್ನು ಬಳಸಿಕೊಂಡು ತಮ್ಮ ಮತದಾರರಿರುವ ಕಡೆಗಳಲ್ಲಿ ಮಾತ್ರ ನೀರಿನ ಸೌಕರ್ಯ ಒದಗಿಸುತ್ತಿದ್ದಾರೆ ಎಂದು ಸ್ಥಳಿಯರು ತಮ್ಮ ಅಳಲು ತೋಡಿಕೊಳ್ಳುತ್ತಾರೆ. ಕೆಲವೆಡೆಗಳಲ್ಲಂತೂ ಟ್ಯಾಂಕರ್‌ನಲ್ಲಿ ಬರುವ ನೀರಿಗೆ ಒಂದು ಬಿಂದಿಗೆಗೆ ರು. 2 ಕೊಟ್ಟು ನೀರು ಪಡೆಯುವ ಪರಿಸ್ಥಿತಿ ಎದುರಾಗಿದೆ. ಚುನಾವಣೆಯ ಅಬ್ಬರದಲ್ಲಿರುವ ಜನಪ್ರತಿನಿಧಿಗಳು ಈ ಸಮಸ್ಯೆಯನ್ನು ಬಗೆಹರಿಸುವುದಾಗಿ ಹಲವು ಸಭೆಗಳಲ್ಲಿ ಬೊಬ್ಬಿಡುತ್ತಿದ್ದಾರಾದರು ಸಮಸ್ಯೆ ಇನ್ನೂ ಬಗೆಹರಿದಿಲ್ಲ.
ಬೊಮ್ಮನಹಳ್ಳಿ, ಹೊಂಗಸಂದ್ರ, ಕೋಡಿಚಿಕ್ಕನಹಳ್ಳಿ, ಮಂಗಮ್ಮನಪಾಳ್ಯ, ಸಿಂಗಸಂದ್ರ, ಕೂಡ್ಲು, ರೂಪೇನ ಅಗ್ರಹಾರ, ಗುಲ್ಬರ್ಗ ಕಾಲೋನಿ, ಬಂಡೆಪಾಳ್ಯ, ಸೋಮಸುಂದರಪಾಳ್ಯಗಳಲ್ಲಿ ಈ ಸಮಸ್ಯೆ ತೀವ್ರ ಸ್ವರೂಪ ಪಡೆದಿದೆ. ಈ ಪ್ರದೇಶಗಳಲ್ಲಿ ಸಾಲುಬಿಂದಿಗೆಗಳನ್ನು ಎಲ್ಲೆಂದರಲ್ಲಿ ಕಾಣಬಹುದು.
ಬಹುಪಾಲು ಗಾರ್ಮೆಂಟ್ಸ್ ನೌಕರರೇ ನೆಲೆಸಿರುವ ಸುತ್ತಮುತ್ತಲ ಪ್ರದೇಶದಲ್ಲಿ, ನೀರಿನ ವ್ಯವಸ್ಥೆ ಇಲ್ಲದಾಗಿದೆ. ಕಟ್ಟಡಗಳ ಮಾಲೀಕರು ಮೂಕರಾಗಿದ್ದಾರೆ. ಬಿರುಬೇಸಿಗೆಯಲ್ಲಿ ನೀರಿಗಾಗಿ ಪರದಾಡುವಂತಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement