ಶಿವಕುಮಾರ್ಗೆ ಕುರುಡು: ಸಿಂಧ್ಯಾ
ಕ.ಪ್ರ.ವಾರ್ತೆ ಕನಕಪುರ ಏ.9
ರಾಮನಗರ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಯಾವುದೇ ಅಭಿವೃದ್ಧಿಕಾರ್ಯ ಮಾಡಿಲ್ಲ. ಮಾಡಿರುವುದಕ್ಕೆ ಸಾಕ್ಷಿ ಏನಿದೆ ಎಂದು ಪ್ರಶ್ನಿಸಿರುವ ಶಾಸಕ ಡಿ.ಕೆ.ಶಿವಕುಮಾರ್ಗೆ ಪ್ರಾಯಶಃ ಕುರುಡುತನ ಆವರಿಸಿರಬೇಕು. ಸಮಾಜ ಪರಿವರ್ತನಾ ಸಂಸ್ಥೆಯ ಹೀರೇಮಠ್ ಯಾರ ಮೇಲೆ ಭ್ರಷ್ಟಾಚಾರದ ಆರೋಪ ಹೊರೆಸಿದ್ದಾರೋ ಅಂಥಾ ಭೂತದ ಬಾಯಲ್ಲಿ ಇಂದು ಭಗವದ್ಗೀತೆ ಕೇಳಬೇಕಾಗುತ್ತಿದೆ ಎಂದು ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ಕಟುವಾಗಿ ಟೀಕಿಸಿದರು.
ಅವರು ಕನಕಪುರದ 10ನೇ ವಾರ್ಡ್ನಲ್ಲಿ ಪಾದಯಾತ್ರೆ ಮೂಲಕ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು.
ಕನಕಪುರ ಕ್ಷೇತ್ರದಲ್ಲಿ ಇಂದು ಭಯದ ವಾತಾವರಣ ಮನೆ ಮಾಡಿದೆ. ಶಾಸಕ ಡಿಕೆಶಿ ಚುನಾವಣೆಯಲ್ಲಿ ಸೋಲುವ ಭಯದಿಂದಲೇ ಹತ್ತಾರು ಸಾವಿರ ಸೀರೆಗಳು, ವಾಚ್ಗಳು ಹಾಗೂ ಕಾಣಿಕೆಗಳನ್ನು ಜನರಿಗೆ ಹಂಚುತ್ತಿದ್ದಾರೆ. ಚುನಾವಣಾ ಆಯೋಗ ಯಾವುದೇ ಕ್ರಮ ಕೈಗೊಳ್ಳದೆ ನಿಷ್ಕ್ರಿಯವಾಗಿದೆ. ಕನಕಪುರ ಕ್ಷೇತ್ರಕ್ಕೆ ವಿಶೇಷ ವೀಕ್ಷಕರನ್ನು ಆಯೋಗ ನೇಮಿಸಬೇಕು ಎಂದು ಒತ್ತಾಯಿಸಿದ ಸಿಂಧ್ಯಾ, ಚುನಾವಣೆ ನಿಷ್ಪಕ್ಷಪಾತವಾಗಿ ನಡೆದರೆ ಶಿವಕುಮಾರ್ ಸೋಲು ಖಚಿತ. ಅವರ ಅಪಪ್ರಚಾರಕ್ಕೆ ಉತ್ತರ ನೀಡಲು ಜೆಡಿಎಸ್ ಮುಖಂಡರಾದ ದೇವೇಗೌಡರು, ಕುಮಾರಸ್ವಾಮಿ ಕ್ಷೇತ್ರದಲ್ಲಿ ಪ್ರಚಾರ ನಡೆಸಿ ಬಣ್ಣ ಬಯಲು ಮಾಡಲಿದ್ದಾರೆ ಎಂದರು.
ಕನಕಪುರ ಪುರಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲವು ವಂಚನೆಯಿಂದಾಗಿದೆ. ಸುಮಾರು ಆರು ಸಾವಿರ ಗ್ರಾಮೀಣ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸಿ ಗೆಲವು ಸಾಧಿಸಿದ್ದಾರೆ. ಕನಕಪುರದ ತಹಸೀಲ್ದಾರರೂ ಕಾಂಗ್ರೆಸ್ ಏಜೆಂಟ ರಂತೆ ವರ್ತಿಸಿ ಚುನಾವಣಾ ಹಿಂದಿನ ದಿನವೂ ಹೆಚ್ಚುವರಿ ಮತದಾರರ ಪಟ್ಟಿ ಸೇರಿಸಿದ್ದಾರೆ. ಕ್ಷೇತ್ರದಲ್ಲಿ ಹಗಲಲ್ಲೇ ಚುನಾವಣಾ ನೀತಿಸಂಹಿತೆಯನ್ನು ಶಾಸಕರು ಸ್ಪಷ್ಟವಾಗಿ ಉಲ್ಲಂಘಿಸಿ ಮನೆಮನೆಗಳಿಗೆ ತೆರಳಿ ಹಣ ವಿತರಿಸಿದ್ದರೂ ಆಯೋಗ ಯಾವುದೇ ಕ್ರಮ ಕೈಗೊಂಡಿಲ್ಲ. ಗೋಯಬಲ್ಸ್ ಪ್ರಚಾರ ತಂತ್ರ ಅನುಸರಿಸುತ್ತಾ ಸುಳ್ಳನ್ನೇ ನಿಜವನ್ನಾಗಿಸುವ ಭ್ರಮೆಯನ್ನು ಶಾಸಕ ಶಿವಕುಮಾರ್ ಸೃಷ್ಟಿಸುತ್ತಿದ್ದಾರೆ ಎಂದು ಟೀಕಿಸಿದರು. ಜೆಡಿಎಸ್ ಮುಖಂಡರಾದ ಡಿ.ಎಂ.ವಿಶ್ವನಾಥ್, ಮಾಜಿ ಪುರಸಭಾಧ್ಯಕ್ಷ ಬಿ.ನಾಗರಾಜು, ಮಲ್ಲಿಕಾರ್ಜುನ್, ಮಾಲ್ತೇಶ್ ವೆಂಕಟೇಶ್, ಪುರಸಭಾಸದಸ್ಯ ಪುಟ್ಟರಾಜು, ಜಯರಾಂ, ಚಿನ್ನಸ್ವಾಮಿ, ಹಲಗಪ್ಪ, ವಿಶ್ವಮೂರ್ತಿ, ಸ್ಟುಡಿಯೋ ಚಂದ್ರು, ಗಬ್ಬಾಡಿರವಿ, ವೃಷಭಯ್ಯ ಪಾಲ್ಗೊಂಡಿದ್ದರು.