21ರಂದು ಶ್ರೀರಂಗನಿಗೆ ವಜ್ರ ಕಿರೀಟ ಧಾರಣೆ
ಕ.ಪ್ರ. ವಾರ್ತೆ , ಮಾಗಡಿ , ಏ.12
ಶ್ರೀರಂಗ ಸೇವಾ ಟ್ರಸ್ಟ್ ವತಿಯಿಂದ ಇತಿಹಾಸ ಪ್ರಸಿದ್ಧ ತಿರುಮಲೆ ರಂಗನಾಥಸ್ವಾಮಿ ಮೂಲ ದೇವರಿಗೆ ವಜ್ರ ಖಚಿತ ಚಿನ್ನದ ನೂತನ ಕಿರೀಟ ಧಾರಣಾ ಮಹೋತ್ಸವ ಏ.21 ರಂದು ಬೆಳಿಗ್ಗೆ 8.30ಕ್ಕೆ ವಿವಿಧ ಧಾರ್ಮಿಕ ಕೈಂಕರ್ಯಗಳೊಂದಿಗೆ ಹಾಗು ವಿವಿಧ ಮಠಾಧೀಶರ ಸಮ್ಮಖದಲ್ಲಿ ನೆರವೇರಲಿದೆ.
ಇದೆ ಸಂದರ್ಭದಲ್ಲಿ 108 ಕುಟುಂಬಗಳಿಂದ ದೇವರಿಗೆ 108 ಸಾಲಿಗ್ರಾಮ ಹಾರ ಸಮರ್ಪಣೆ ಹಾಗು ಶುದ್ಧ ಕುಡಿಯುವ ನೀರಿನ ಸ್ಥಾವರ ಉದ್ಘಾಟನೆ ಸಹ ನೆರವೇರಿಸಲಾಗುವುದು ಎಂದು ಶ್ರೀರಂಗ ಸೇವಾ ಟ್ರಸ್ಟ್ ಅಧ್ಯಕ್ಷ ಟಿ.ಎಸ್. ಸತೀಶ್ ತಿಳಿಸಿದ್ದಾರೆ. ಇದರ ಅಂಗವಾಗಿ ನಾಲ್ಕು ವೇದಗಳ ಪಾರಾಯಣ, ವಿಷ್ಣು ಸಹಸ್ರ ನಾಮ ಪಾರಾಯಣ, ನಾದಸ್ವರ ಸೇವೆ ನಡೆಯಲಿದೆ ಎಂದರು.
ಧಾರ್ಮಿಕ ಸಮಾರಂಭ: ವಜ್ರಖಚಿತ ಚಿನ್ನದ ಕಿರೀಟ ಧಾರಣ ಮಹೋತ್ಸವ ಪ್ರಯುಕ್ತ ಧಾರ್ಮಿಕ ಸಮಾರಂಭ ಏರ್ಪಡಿಸಲಾಗಿದ್ದು, ಸಿದ್ದಗಂಗಾ ಮಠಾಧ್ಯಕ್ಷ ಕರ್ನಾಟಕ ರತ್ನ ಡಾ.ಶಿವಕುಮಾರಸ್ವಾಮೀಜಿ, ಆದಿಚುಂಚನಗಿರಿ ನಿರ್ಮಲಾನಂದನಾಥ ಸ್ವಾಮೀಜಿ ಸೇರಿದಂತೆ ಮತ್ತಿತರೆ ಸ್ವಾಮೀಜಿಗಳು ಸಾನ್ನಿಧ್ಯವಹಿಸುವರು. ಶಿವಗಂಗೆ ಮೇಲಣ ಗವಿ ವೀರಸಂಹಸಾನ ಸಂಸ್ಥಾನ ಮಠದ ಮಠದ ಮಲಯ ಶಾಂತಮುನಿ ಶಿವಚಾರ್ಯಸ್ವಾಮೀಜಿ ಉಪನ್ಯಾಸ ನೀಡಲಿದ್ದಾರೆ. ಗುಮ್ಮಸಂದ್ರ ಮಠದ ಚಂದ್ರಶೇಖರಸ್ವಾಮಿ, ಪೋಲೋಹಳ್ಳಿ ಭವತಾರಿಣಿ ಮಠದ ಮಾತಾ ವಿವೇಕಮಯಿ, ಆಧ್ಯಾತ್ಮಿಕ ಚಿಂತಕ ನಿಧಿ ಪಾರ್ಥಸಾರಥಿ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ. ಇದೆ ಸಂದರ್ಭದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.