ಜಾತಿ ಜಾತಿಗಳ ನಡುವಿನ ಸಂಘರ್ಷ ಅಂತ್ಯಗೊಳ್ಳಲಿ
ಕ.ಪ್ರ. ವಾರ್ತೆ ರಾಮನಗರ ಏ.13
ಜಾತಿ ಜಾತಿಗಳ ನಡುವಿನ ಸಂಘರ್ಷ ಅಂತ್ಯಗೊಂಡು, ಮನುಷ್ಯ ಜಾತಿ ಒಂದೇ ಎನ್ನುವ ವಿಶಾಲ ಮನೋಭಾವ ಬೆಳೆಸಿಕೊಂಡರೆ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ ಅಭಿಪ್ರಾಯಪಟ್ಟರು.
ನಗರದ ಸ್ಫೂರ್ತಿ ಭವನದಲ್ಲಿ ಜಿಲ್ಲಾ ಲೇಖಕರ ವೇದಿಕೆಯ ಉದ್ಘಾಟನೆ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯ ತನ್ನ ಸ್ವಾರ್ಥ ಸಾಧನೆಗಾಗಿ ಮನುಷ್ಯತ್ವವನ್ನೇ ಮರೆಯುತ್ತಿದ್ದಾನೆ ಎಂದು ವಿಷಾದ ವ್ಯಕ್ತಪಡಿಸಿದರು.
ಕುವೆಂಪು, ಬುದ್ಧ, ಬಸವ, ಅಂಬೇಡ್ಕರ್ ಅವರು ಜಗತ್ತಿಗೆ ವಿಶ್ವಮಾನವ ಸಂದೇಶವನ್ನು ಸಾರಿದರು. ಮಹನೀಯರ ಆದರ್ಶ ಚಿಂತನೆಗಳನ್ನು ಅನುಷ್ಠಾನಗೊಳಿಸುವ ಅವಶ್ಯಕತೆ ಇದೆ. ಅವರು ಹಾಕಿಕೊಟ್ಟ ಹಾದಿಯಲ್ಲಿ ನಡೆದಾಗ ಮಾತ್ರ ಜಾತಿ ವ್ಯವಸ್ಥೆಯನ್ನು ಬುಡಸಮೇತ ತೊಡೆದುಹಾಕಲು ಸಾಧ್ಯ ಎಂದರು.
ಹೊಸ ಹೊಸ ತಂತ್ರಜ್ಞಾನದ ಆವಿಷ್ಕಾರದ ಭರಾಟೆಯಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ನಶಿಸುತ್ತಿವೆ. ಸಾಹಿತ್ಯವನ್ನು ರಚಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ. ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡವರಿಗೆ ಪ್ರೋತ್ಸಾಹದ ಅಗತ್ಯತೆ ಇದೆ. ಸಾಹಿತಿಗಳು ಮತ್ತು ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವನ್ನು ಸಂಘ-ಸಂಸ್ಥೆಗಳು ಮಾಡಬೇಕಿದೆ ಎಂದು ಪುಂಡಲೀಕ ಹಾಲಂಬಿ ತಿಳಿಸಿದರು.
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪ್ರವಾಸ ಕಥನಗಳಿಗೆ ತನ್ನದೇ ಆದ ಪರಂಪರೆ ಇದೆ. ಪ್ರವಾಸ ಕಥನಗಳು ಸಾಂಸ್ಕಣತಿಕ ವಿನಿಮಯಕ್ಕೆ ಅನುವು ಮಾಡಿಕೊಡುತ್ತವೆ. ಆದ್ದರಿಂದ ಹೆಚ್ಚು ಹೆಚ್ಚು ಪ್ರವಾಸ ಕಥನಗಳನ್ನು ಇಂದಿನ ಸಾಹಿತಿಗಳು ರಚಿಸಬೇಕು ಎಂದು ಎಚ್.ಶಿವರಾಮಯ್ಯ ರಚಿಸಿರುವ ಅಬುಧಾಬಿಯಲ್ಲಿ ನಾನು ಪ್ರವಾಸಿ ಕೃತಿ ಬಿಡುಗಡೆ ಮಾಡಿದ ಡಾ.ಬಂಜಗೆರೆ ಜಯಪ್ರಕಾಶ್ ತಿಳಿಸಿದರು.
ನಾಮಕಾವಸ್ಥೆ: ರಾಜ್ಯದಾದ್ಯಂತ ಅಸ್ತಿತ್ವದಲ್ಲಿರುವ ಬಹುತೇಕ ಸಂಘ-ಸಂಸ್ಥೆಗಳು ನಾಮಕಾವಸ್ಥೆಯವಾಗಿವೆ. ಇಂತಹವುಗಳಿಂದ ಸಮಾಜಕ್ಕೆ ಯಾವುದೇ ಅನುಕೂಲವಿಲ್ಲ. ಅತ್ಯಂತ ಕ್ರಿಯಾಶೀಲವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಸಂಘ-ಸಂಸ್ಥೆಗಳು ಮಾತ್ರ ಸಾಹಿತ್ಯ, ಸಂಸ್ಕೃತಿಯನ್ನು ಬೆಳಸಲು ಕಿರು ಕಾಣಿಕೆ ನೀಡಬಲ್ಲವು ಎಂದು ವಿಮರ್ಶಕ ಡಾ.ಬೈರಮಂಗಲ ರಾಮೇಗೌಡ ಹೇಳಿದರು.
ಇತಿಹಾಸ ಪ್ರಾಧ್ಯಾಪಕ ಡಾ.ಮುನಿರಾಜಪ್ಪ, ಸಾಹಿತಿ ಖಂಡಪರಶು, ಕಾದಂಬರಿಗಾರ್ತಿ ಮಂಗಳ ಗೋಪಾಲ್ ಅವರನ್ನು ಸನ್ಮಾನಿಸಲಾಯಿತು. ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ಬಾನಂದೂರು ಕೆಂಪಯ್ಯ, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಡಾ.ಕೋ.ವೆಂ.ರಾಮಕೃಷ್ಣೇಗೌಡ, ಎಚ್.ಶಿವರಾಮಯ್ಯ, ನಂಜೇಗೌಡ, ಜಿಲ್ಲಾ ಲೇಖಕರ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಕೂ.ಗಿ.ಗಿರಿಯಪ್ಪ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎಚ್. ಪ್ರಕಾಶ್ ಮತ್ತಿತರರು ಇದ್ದರು.