ಶಾಸಕ ಜೆ.ನರಸಿಂಹಸ್ವಾಮಿ ರಾಜಕೀಯ ನಿವೃತ್ತಿ
ಕ.ಪ್ರ.ವಾರ್ತೆ ದೊಡ್ಡಬಳ್ಳಾಪುರ ಏ.13
ದೊಡ್ಡಬಳ್ಳಾಪುರ ಶಾಸಕ, ಕೊಳಗೇರಿ ಅಭಿವೃದ್ಧಿ ಮಂಡಲಿ ಅಧ್ಯಕ್ಷ ಜೆ.ನರಸಿಂಹಸ್ವಾಮಿ ರಾಜಕೀಯದಿಂದ ನಿವೃತ್ತಿಯಾಗುವುದಾಗಿ ಘೋಷಿಸಿದ್ದಾರೆ.
ಕಳೆದ ತಿಂಗಳು ನಡೆದ ಕಾರ್ಯಕರ್ತರ ಸಭೆಯಲ್ಲೇ ರಾಜಕೀಯ ನಿವೃತ್ತಿ ಪ್ರಸ್ತಾಪ ಮಾಡಿದ್ದ ಅವರು, ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರ ಕೈಗೊಂಡಿದ್ದರು. ಆದರೆ ಮತ್ತೆ ಅವರು ನಿವೃತ್ತಿ ಮಾತನ್ನಾಡಿದ್ದು, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.
ಕಾರಣವೇನು: ರಾಜಕೀಯ ನಿವೃತ್ತಿ ಪಡೆಯಲು ರಾಜಕೀಯದ ಕಾರಣಗಳನ್ನು ಮುಂದಿಡದ ನರಸಿಂಹಸ್ವಾಮಿ
ನನಗೆ ವಯಸ್ಸಾಗಿದೆ. ದೊಡ್ಡಬಳ್ಳಾಪುರ ಜನರ ಆಶೀರ್ವಾದದಿಂದ ತಾಲೂಕು ಬೋರ್ಡ್ನಿಂದ ಹಿಡಿದು ಜಿಲ್ಲಾ ಪಂಚಾಯಿತಿ, ಶಾಸನಸಭೆಗಳಿಗೆ ಕಳೆದ 2 ದಶಕಗಳಲ್ಲಿ ನಿರಂತರವಾಗಿ ಆಯ್ಕೆಯಾಗಿದ್ದೇನೆ. ಸತತ 3 ಬಾರಿ ಶಾಸಕನಾಗಿ ಆಯ್ಕೆ ಮಾಡಿದ್ದರು. ಪಕ್ಷಾಂತರ ಮಾಡಿದ ಸಂದರ್ಭದಲ್ಲಿ ಎಲ್ಲರೂ ನನ್ನ ಕೈಬಿಟ್ಟರೂ ನನ್ನ ಮತದಾರರು ಕೈಬಿಟ್ಟಿರಲಿಲ್ಲ. ಹೀಗಾಗಿ ಅವರಿಗೆ ನಾನು ಕೃತಜ್ಞ. ನನಗೆ ವಯಸ್ಸಾಗಿದೆ. 65 ವರ್ಷದ ನಾನು ಚಟುವಟಿಕೆಯಿಂದ ರಾಜಕಾರಣದಲ್ಲಿ ತೊಡಗಲು ಸಾಧ್ಯವಾಗುತ್ತಿಲ್ಲ. ಆರೋಗ್ಯದ ಕಡೆ ಗಮನ ಹರಿಸಬೇಕಿದೆ. ಜೊತೆಗೆ ಇತ್ತೀಚಿನ ರಾಜಕೀಯ ವಿದ್ಯಮಾನಗಳು ನನಗೆ ಬೇಸರ ತರಿಸಿವೆ ಎಂದಷ್ಟೇ ಹೇಳಿದ್ದಾರೆ.
ಶನಿವಾರ ಬೆಳಗ್ಗೆ ಮಾಧ್ಯಮದ ಕೆಲವರನ್ನು ಕರೆದು ಈ ನಿರ್ಧಾರ ಪ್ರಕಟಿಸಿರುವ ನರಸಿಂಹಸ್ವಾಮಿ, ರಾಜಕಾರಣ ಮೊದಲಿನಿಂತಿಲ್ಲ. ರಾಷ್ಟ್ರ ಮಟ್ಟದಿಂದ ಹಿಡಿದು ಸ್ಥಳೀಯ ಹಂತದವರೆಗೆ ನನಗೆ ರಾಜಕೀಯ ಬೇಸರ ತರಿಸಿದೆ. ಹಣದ ಮತ್ತು ತೋಳ್ಬಲದ ಪಾರುಪತ್ಯವೇ ಮೇಲಾಗಿರುವಾಗ ಭ್ರಷ್ಟಾಚಾರ ರಹಿತ ರಾಜಕಾರಣ ಮರೀಚಿಕೆಯಾಗಿದೆ. ಹೀಗಾಗಿ ರಾಜಕೀಯ ಸಾಕಾಗಿದೆ. ಇದರಲ್ಲಿ ಯಾವುದೇ ಒತ್ತಡವೂ ಇಲ್ಲ ಎಂದು ಹೇಳಿದ್ದಾರೆ.
ಸಿದ್ಧನಿಲ್ಲ: ಬಿಜೆಪಿ ಈಗಾಗಲೇ ದೊಡ್ಡಬಳ್ಳಾಪುರ ಕ್ಷೇತ್ರಕ್ಕೆ ನನ್ನನ್ನು ಅಭ್ಯರ್ಥಿ ಎಂದು ಘೋಷಿಸಿದೆ. ಆದರೆ ಸ್ಪರ್ಧಿಸಲು ನಾನು ಸಿದ್ಧನಿಲ್ಲ. ಹೀಗಾಗಿ ಕ್ಷೇತ್ರದಿಂದ ಯಾರನ್ನಾದರೂ ಕಣಕ್ಕಿಳಿಸುವಂತೆ ಹೈಕಮಾಂಡ್ಗೆ ಮನವಿ ಮಾಡುತ್ತೇನೆ. ಮತ್ತೆ ಪಕ್ಷಾಂತರ ಮಾಡುತ್ತಿಲ್ಲ. ಆದರೆ ಸಕ್ರಿಯ ರಾಜಕಾರಣಿಯಾಗಿಯೂ ಮುಂದುವರೆಯುವುದಿಲ್ಲ. ಕ್ಷೇತ್ರದ ಜನ ನನ್ನ ತಂದೆಯನ್ನು 4 ಬಾರಿ ಮತ್ತು ನನ್ನನ್ನು 3 ಬಾರಿ ಶಾಸಕನಾಗಿ ಆಯ್ಕೆ ಮಾಡಿದ್ದರು. ಆದಷ್ಟೂ ಮಟ್ಟಿಗೆ ಅವರ ಋಣ ತೀರಿಸಿದ್ದೇನೆ ಎಂದು ವಿವರಿಸಿದ್ದಾರೆ.
ಕಾರ್ಯಕರ್ತರ ವಿಶ್ವಾಸ: ನರಸಿಂಹಸ್ವಾಮಿ ಅವರು ಈ ಬಾರಿ ಸ್ಪರ್ಧೆ ಮಾಡುತ್ತಾರೆ. ಅವರ ವೈಯಕ್ತಿಕ ನಿರ್ಧಾರಗಳೇನೇ ಇದ್ದರೂ ಕಾರ್ಯಕರ್ತರ ಮಾತಿಗೆ ಮನ್ನಣೆ ನೀಡುತ್ತಾರೆ. ಈ ಬಾರಿ ಅವರು ಗೆಲ್ಲುವ ಅಭ್ಯರ್ಥಿ. ಕ್ಷೇತ್ರದ ಜನ ಅವರ ಕೈಬಿಡುವುದಿಲ್ಲ. ನಿವೃತ್ತಿಯಾಗಲು ಇದೂ ಸೂಕ್ತ ಸಮಯವೂ ಅಲ್ಲ, ಅವರ ನಿವೃತ್ತಿಯನ್ನು ಒಪ್ಪಿಕೊಳ್ಳಲೂ ಸಾಧ್ಯವಿಲ್ಲ ಎಂದು ನರಸಿಂಹಸ್ವಾಮಿ ಬೆಂಬಲಿಗ ಕಾರ್ಯಕರ್ತರು ಹೇಳಿದ್ದಾರೆ.