ನೀತಿ ಸಂಹಿತೆ ಕಾಟ, ಸಂಭ್ರಮಕ್ಕೆ ಬಿತ್ತು ಕತ್ತರಿ
ಸೂಲಿಬೆಲೆ: ಮೇ 5ರಂದು ಕರ್ನಾಟಕ ವಿಧಾನ ಸಭಾ ಕ್ಷೇತ್ರಕ್ಕೆ ಚುನಾವಣಿ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಅಂಬೇಡ್ಕರ್ ಅವರ 122 ಜನ್ಮ ದಿನಾಚರಣಿಗೆ ನೀತಿ ಸಂಹಿತೆ ಕಾಟ ಕಾಡಿದ ಪರಿಣಾಮ ಹೊಸಕೋಟೆ ತಾಲೂಕಿನ ಬಹುತೇಕ ಕಡೆ ಸಂಭ್ರಮದ ಆಚರಣೆಗೆ ಕಲ್ಲು ಬಿತ್ತು. ಹೊಸಕೋಟೆ ತಾಲೂಕಿನಾದ್ಯಂತ ಇರುವ ದಲಿತ ಸಂಘಟನೆಗಳು ತಮ್ಮ ನಾಯಕನ ಜನ್ಮ ದಿನ ಸಮಾರಂಭಗಳನ್ನು ಪ್ರತಿವರ್ಷ ಅದ್ಧೂರಿಯಾಗಿ ಸಂಭ್ರಮದಿಂದ ಆಚರಣೆ ಮಾಡುವ ಪದ್ಧತಿಯನ್ನು ಬೆಳೆಸಿಕೊಂಡು ಬಂದಿದ್ದು, ಈ ಬಾರಿ ಸಂಭ್ರಮಕ್ಕೆ ತಣ್ಣೀರೆರಚ್ಚಿದ್ದು ಚುನಾವಣೆ ಆಯೋಗ. ಕಟ್ಟು ನಿಟ್ಟು ನೀತಿ ಸಂಹಿತೆಯನ್ನು ಜಾರಿ ಮಾಡಿರುವ ಆಯೋಗ ಅಂಬೇಡ್ಕರ್ ಜನ್ಮ ದಿನ ಸಮಾರಂಭ ಆಚರಣೆ ನೆಪದಲ್ಲಿ ರಾಜಕಾರಣಗಳು ಪಾಲ್ಗೊಂಡು ತಮ್ಮ ಹಿತಾಸಕ್ತಿಯನ್ನು ಈಡೇರಿಸಿಕೊಳ್ಳುತ್ತಾರೆ ಎಂಬ ಆಲೋಚನೆಯಿಂದ ಅದ್ಧೂರಿ ಸಮಾರಂಭಗಳಿಗೆ ಬ್ರೇಕ್ ಹಾಕಿತ್ತು.