12 ವರ್ಷದ ಹೈಡ್ರಾಮಾಗೆ ಕೊನೆ: ಅನಿತಾ ಕುಮಾರಸ್ವಾಮಿ
ಕ.ಪ್ರ.ವಾರ್ತೆ , ಚನ್ನಪಟ್ಟಣ , ಏ.15
ಪ್ರತಿಬಾರಿ ಚುನಾವಣೆಯಲ್ಲೂ ಮತದಾರರಿಗೆ ಟೋಪಿ ಹಾಕುತ್ತಾ ಬಂದಿರುವವರನ್ನು ಅವರ
ಮಾತೃಪಕ್ಷ , ಕೆಟ್ ನೀಡದೆ ಮುಖಭಂಗ ಮಾಡಿದೆ ಎಂದು ಜೆಡಿಎಸ್ ಅಭ್ಯರ್ಥಿ ಅನಿತಾಕುಮಾರ ಸ್ವಾಮಿ ಲೇವಡಿ ಮಾಡಿದರು.
ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, 12ವರ್ಷದಿಂದ ಇಲ್ಲಿನ ಮತದಾರರನ್ನು ವಂಚಿಸುತ್ತಾ ಬಂದಿದ್ದವರ ಹೈಡ್ರಾಮಾ ಇಲ್ಲಿಗೆ ಕೊನೆಗೊಂಡಿದ್ದು ಇನ್ನು ಮುಂದೆ ತಾಲೂಕಿನಲ್ಲಿ ನಿಜವಾದ ಅಭಿವೃದ್ಧಿ ಕೆಲಸಗಳು ಆರಂಭವಾಗಲಿವೆ ಎಂದರು.
ಗ್ರಾಮಸಂದರ್ಶನದ ಮೂಲಕ ನಾನು ತಾಲೂಕಿನ ಪ್ರತಿಯೊಂದು ಹಳ್ಳಿಯನ್ನು ಸುತ್ತಾಡಿದ್ದು ದಶಕದಿಂದ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೆ ಇಲ್ಲಿನ ಜನತೆ ಪರದಾಡುತ್ತಿದ್ದು, ಈ ಬಾರಿ ಜನತೆ ಜೆಡಿಎಸ್ ಬೆಂಬಲಿಸಿದರೆ ಉತ್ತಮ ಬದಲಾವಣೆ ತರುವುದು ಶತಸಿದ್ಧ ಎಂದು ತಿಳಿಸಿದರು.
ಜೆಡಿಎಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ತಾಲೂಕು ಆಭಿವೃದ್ಧಿಯಾಗಿದ್ದನ್ನು ಹೊರತುಪಡಿಸಿದರೆ ಇಲ್ಲಿಯವರೆಗೂ ಯಾವುದೇ ಕೆಲಸವಾಗಿಲ್ಲ, ಕೇವಲ ಶಂಕುಸ್ಥಾಪನೆ ಮಾಡುತ್ತಾ ಅಭಿವೃದ್ಧಿ ಮಾಡುತ್ತೇನೆಂದು ಹೇಳಿಕೊಂಡು ಕಾಲಹರಣ ಮಾಡುತ್ತ ಜನತೆಯ ದಿಕ್ಕುತಪ್ಪಿಸಿದ್ದಾರೆ ಎಂದರು.
ತಾಲೂಕಿನ ಜನತೆಯ ಆಶೀರ್ವಾದ ಪಡೆದು ಇಂದು ನಾಮಪತ್ರ ಸಲ್ಲಿಸಿದ್ದೇನೆ, ಜನತೆ ನನ್ನ ಕೈಬಿಡುವುದಿಲ್ಲ ಎಂಬ ವಿಶ್ವಾಸ ತಮಗಿದೆ ಎಂದ ಅನಿತಾ, ಗ್ರಾಮೀಣ ಭಾಗದಲ್ಲಿನ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಶಾಶ್ವತ ನೀರಾವರಿ ಯೋಜನೆ ರೂಪಿಸಲು ಪಕ್ಷ ರೂಪುರೇಷೆ ಸಿದ್ದಗೊಳಿಸಿದ್ದು, ಜನತೆ ಜೆಡಿಎಸ್ ಬೆಂಬಲಿಸುವಂತೆ ಮನವಿ ಮಾಡಿದರು.
ಸಾವಿರ ಸಾವಿರ ಮನೆ ಏನಾಯ್ತು: ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಮಾತನಾಡಿ, ತಾಲೂಕನ್ನು ಗುಡಿಸಲು ರಹಿತ ತಾಲೂಕನ್ನಾಗಿಸುತ್ತೇನೆಂದು 1999ರಿಂದ ಹೇಳಿಕೊಂಡು ಬರುತ್ತಿರುವ ಯೋಗೇಶ್ವರ್ ಇದುವರೆಗೂ ಅರ್ಹರಿಗೆ ಆಶ್ರಯ ಯೋಜನೆಯಡಿ ನಿವೇಶನ ಅಥವಾ ಮನೆಗಳನ್ನು ನೀಡಲು ಮುಂದಾಗಿಲ್ಲ, ಕಳೆದ ಬಾರಿಯ ಚುನಾವಣೆಯಲ್ಲಿ 10 ಸಾವಿರ ಮನೆ ತಂದಿರುವುದಾಗಿ ಪತ್ರ ಬರೆದಿದ್ದ ಅವರು ಎಷ್ಟು ಮನೆಗಳನ್ನು ನೀಡಿದ್ದಾರೆಂದು ದಾಖಲೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.
ಅವರು ಸಚಿವರಾಗಿದ್ದ ಅವಧಿಯಲ್ಲಿ ತಾಲೂಕಿಗೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಬಹುದಾಗಿತ್ತು. ಆದರೆ ಇಚ್ಛಾಶಕ್ತಿಯ ಕೊರತೆಯಿಂದ ಅನುದಾನಗಳು ಮಂಜೂರಾಗಲಿಲ್ಲ, ಈಗ ಮಂಜೂರಾಗಿರುವ ಅನುದಾನಗಳು ಇವರು ಪಕ್ಷ ಬಿಟ್ಟು ಬಂದಿರುವುದರಿಂದ ವಾಪಸ್ ಹೋಗುವ ಭೀತಿಯಲ್ಲಿವೆ ಎಂದರು. ಕಳೆದ ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಗಳು ಏನಾಯಿತು ಎಂದು ಪ್ರಶ್ನಿಸಿದ ಅವರು, ಭರವಸೆ ಮಾತುಗಳನ್ನು ಕೇಳಿ ಬೇಸತ್ತಿರುವ ಜನತೆ ಈ ಬಾರಿ ಯೋಗೇಶ್ವರ್ಗೆ ತಕ್ಕ ಪಾಠ ಕಲ್ಲಿಸುತ್ತಾರೆಂದರು. ತಾಲೂಕಿನ ಅಭಿವಣದ್ದಿಗಾಗಿ ಪಣ ತೊಟ್ಟಿರುವ ಅನಿತಾ ಅವರಿಗೆ ಜನತೆ ಆಶೀರ್ವದಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಮೂಲ್ ನಿರ್ದೇಶಕ ಎಸ್.ಲಿಂಗೇಶ್ಕುಮಾರ್, ಮುಖಂಡ ಸಿಂ.ಲಿಂ.ನಾಗರಾಜು, ತಾಲೂಕು ಜೆಡಿಎಸ್ ಅಧ್ಯಕ್ಷ ವಡ್ಡರಹಳ್ಳಿ ರಾಜಣ್ಣ, , ಎಪಿಸಿಎಂಎಸ್ ಅಧ್ಯಕ್ಷ ಜಿ.ಕೃಷ್ಣೇಗೌಡ, ಹಾಪ್ಕಾಮ್ಸ್ದೇವರಾಜು, ಒಕ್ಕಲಿಗರ ಸಂಘದ ನಿರ್ದೇಶಕ ಮಲ್ಲಿಕಾರ್ಜುನಗೌಡ, ಮುಖಂಡರಾದ ನಿಜಲಿಂಗೇಗೌಡ, ಸತ್ಯನಾರಾಯಣ, ವಾಸೀಲ್ ಆಲಿಖಾನ್ ಜಿ.ಪಂ ಸದಸ್ಯ ರಘುಕುಮಾರ್ ಮುಂತಾದವರು ಉಪಸ್ಥಿತರಿದ್ದರು.