ನೆಲಮಂಗಲದಲ್ಲಿ ಉಮೇದುವಾರರು
ಕ.ಪ್ರ.ವಾರ್ತೆ , ನೆಲಮಂಗಲ , ಏ.15
ನೆಲಮಂಗಲ ವಿಧಾನಸಭೆ ಮೀಸಲು ಕ್ಷೇತ್ರಕ್ಕೆ ಮೇ 5ರಂದು ನಡೆಯಲಿರುವ ಚುನಾವಣೆಯ ಉಮೇದುವಾರಿಕೆಗೆ ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಕೆಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿಗಳು ಸೋಮವಾರ ನಾಮಪತ್ರ ಸಲ್ಲಿಸಿದರು.
ಏಪ್ರಿಲ್ 10ರಿಂದ ಪ್ರಾರಂಭವಾಗಿದ್ದರೂ ಯಾವುದೇ ರಾಜಕೀಯ ಪಕ್ಷದವರು ಸೇರಿದಂತೆ ಪಕ್ಷೇತರರು ಉಮೇದುವಾರಿಕೆಯನ್ನು ಸಲ್ಲಿಸಿರಲಿಲ್ಲ. ಏಪ್ರಿಲ್ 15 ಶುಭ ಸೋಮವಾರವಾದ್ದರಿಂದ ಒಂದೇ ದಿನದಲ್ಲಿ ವಿವಿಧ ಪಕ್ಷಗಳ 4 ಮಂದಿ ನಾಮಪತ್ರ ಸಲ್ಲಿಸಿದರು. ಬಿಜೆಪಿ ಅಭ್ಯರ್ಥಿ ಶಾಸಕ ಎಂ.ವಿ.ನಾಗರಾಜು ಪಟ್ಟಣದ ಪ್ರವಾಸಿ ಮಂದಿರದಿಂದ ತಮ್ಮ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ 12. 20ಕ್ಕೆ ತಾಲೂಕು ಕಚೇರಿಯಲ್ಲಿನ ಚುನಾವಣಾಧಿಕಾರಿಗೆ ತಮ್ಮ ನಾಮಪತ್ರದ ಉಮೇದುವಾರಿಕೆಯನ್ನು ಸಲ್ಲಿಸಿದರು.ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಾಜಿ ಸಚಿವ ಅಂಜನಮೂರ್ತಿ ತಮ್ಮ ಕುಟುಂಬ ಸದಸ್ಯರು ಸೇರಿದಂತೆ ಬೆಂಬಲಿಗರೊಂದಿಗೆ ಪಟ್ಟಣದ ಕವಾಡಿಮಠದ ಶ್ರೀ ವೀರಭದ್ರಸ್ವಾಮಿಗೆ ಪೂಜೆ ಸಲ್ಲಿಸಿ ನಂತರ ಮೆರವಣಿಗೆಯ ಮೂಲಕ ತಾಲೂಕು ಕಚೇರಿಯಲ್ಲಿನ ಚುನಾವಣಾಧಿಕಾರಿಗೆ ತಮ್ಮ ನಾಮಪತ್ರದ ಉಮೇದುವಾರಿಕೆಯನ್ನು ಸಲ್ಲಿಸಿದರು. ವೆಂಕಟರಾಮಯ್ಯ , ಎನ್.ಡಿ.ಎ ಮಾಜಿ ಅಧ್ಯಕ್ಷ ಜಿ.ಎಸ್.ರಂಗನಾಥ್, ಉಮಾಶಂಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದರಾಮಯ್ಯ, ಸಿ.ಆರ್.ಗೌಡ, ಶಂಕರಪ್ಪ, ನಾಗರಾಜು, ಚೌಡಯ್ಯ, ಮಾರಪ್ಪ ಇದ್ದರು. ಕರ್ನಾಟಕ ಜನತಾ ಪಕ್ಷದ ಅಭ್ಯರ್ಥಿ ಜಿ.ಪಂ. ಮಾಜಿ ಸದಸ್ಯ ಎಚ್.ಪಿ.ಚಲುವರಾಜು ಶಿವಗಂಗೆಯ ಪವಾಡ ಗಣೇಶನಿಗೆ ಪೂಜೆ ಸಲ್ಲಿಸಿ ತಮ್ಮ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಸಾಗಿ ತಾಲೂಕು ಕಚೇರಿಯಲ್ಲಿನ ಚುನಾವಣಾಧಿಕಾರಿಗೆ ತಮ್ಮ ನಾಮಪತ್ರದ ಉಮೇದುವಾರಿಕೆಯನ್ನು ಸಲ್ಲಿಸಿದರು.ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಬೆಟ್ಟಸ್ವಾಮಿಗೌಡ, ವೀರಶೈವ ಸಹಕಾರ ಸಂಘದ ಅಧ್ಯಕ್ಷ ಬಿ.ಎಸ್.ಪರಮಶಿವಯ್ಯ, ಜಿಲ್ಲಾ ಕೆಜೆಪಿ ಅಧ್ಯಕ್ಷ ಮಲ್ಲಿಕಾರ್ಜುನ ಇದ್ದರು.