ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಹುರಿಯಾಳುಗಳಲ್ಲಿ ಕಂಡು ಬಂದ ರಣೋತ್ಸಾಹ

Vishwanath S
Updated On : 16 Apr 2013, 12:35 pm

ಕ.ಪ್ರ.ವಾರ್ತೆ ,  ರಾಮನಗರ ,  ಏ.15
ಶುಭ ಸೋಮವಾರದಲ್ಲಿ ಅಭ್ಯರ್ಥಿಗಳಿಗೆ ಅಡ್ಡಿಯಾದ ಯಮಗಂಡ ಕಾಲ... ಸೂಕ್ತ ಸಮಯಕ್ಕಾಗಿ ಕಾದು ಕುಳಿತ ಉಮೇದುವಾರರು... ಬದಲಾಯ್ತು ದಳಪತಿಯ ದಾರಿ... ಭಾವೈಕ್ಯತೆಯ ಸರ್ಕಸ್... ಹುರಿಯಾಳುಗಳಲ್ಲಿ ಕಂಡು ಬಂದ ರಣೋತ್ಸಾಹ... ಕಾರ್ಯಕರ್ತರಲ್ಲಿ ಮೂಡಿದ್ದ ಹುಮ್ಮಸ್ಸು... ನಾಮಪತ್ರ ಸಲ್ಲಿಕೆಗೆ ನೆರೆದ ಜನಜಾತ್ರೆ... ಬಲಪ್ರದರ್ಶನ ತೋರದ ಸಿಂಧ್ಯಾ... ಹೆದ್ದಾರಿ ಸಂಚಾರಕ್ಕೆ ಸಂಚಕಾರ... ಬಿಗಿ ಬಂದೋಬಸ್ತ್‌ನಡುವೆಯೂ ನೂಕು ನುಗ್ಗಲು... ಕನಕಪುರದಲ್ಲಿ ಅಭ್ಯರ್ಥಿ ಬೆಂಬಲಿಗರಿಗೆ ಲಾಠಿ ರುಚಿ...
ರಾಜಕೀಯವೇ ಉಸಿರಾಗಿರುವ ರೇಷ್ಮೆನಾಡು ರಾಮನಗರದಲ್ಲಿ ವಿಧಾನಸಭೆ ಚುನಾವಣೆಗೆ ಸೋಮವಾರ ನಾಮಪತ್ರ ಸಲ್ಲಿಕೆಯ ಅಬ್ಬರ ಜೋರಾಗಿತ್ತು. ಘಟಾನುಘಟಿ ನಾಯಕರು ದಂಡು ಸಮೇತ ಮೆರವಣಿಗೆಯೊಂದಿಗೆ ಬಲ ಪ್ರದರ್ಶಿಸಿದರು. ಅಭ್ಯರ್ಥಿಗಳ ನಾನಾ ರೀತಿಯ ಕಸರತ್ತು, ಚುನಾವಣಾಧಿಕಾರಿ ಕಚೇರಿ ಒಳ ಮತ್ತು ಹೊರಗೆ ಕಂಡು-ಕೇಳಿದ ಸ್ವಾರಸ್ಯಕರ ಸಂಗತಿಗಳ ಝಲಕ್ ಇಲ್ಲಿದೆ.  
ಯಮಗಂಡ ಕಾಲದ ಅಡ್ಡಿ: ಸೋಮವಾರ ನಾಮಪತ್ರ ಸಲ್ಲಿಸಿದರೆ ಶುಭವಾಗುತ್ತದೆ ಎಂದು ನಂಬಿದ್ದ ಅಭ್ಯರ್ಥಿಗಳು ಯಮಗಂಡ ಕಾಲಕ್ಕೆ ಅಂಜಿದರು. ಬೆಳಗ್ಗೆ 7.30 ರಿಂದ 9ರವರೆಗೆ ರಾಹುಕಾಲವಿತ್ತು. ಬಹುತೇಕ ಅಭ್ಯರ್ಥಿಗಳು ರಾಹುಕಾಲಕ್ಕೆ ಮುನ್ನ ಇಲ್ಲವೇ ನಂತರವಷ್ಟೇ ಮನೆಯಿಂದ ಹೊರ ಬಂದರು. ಈ ಹೊತ್ತು ಕಳೆದಾಗಷ್ಟೇ ದೇಗುಲ, ಮಸೀದಿಗೆ ತೆರಳಿ ಪ್ರಾರ್ಥನೆ ಬಳಿಕ ಮೆರವಣಿಗೆ ಹೊರಟರು.
ಇದಾದ ನಂತರ ಮಧ್ಯಾಹ್ನ 10.30 ರಿಂದ 12ರವರೆಗೆ ಯಮಗಂಡ ಕಾಲ ಎದುರಾಯ್ತು. ಈ ಅವಧಿಯಲ್ಲಿ ಪ್ರಮುಖರ ಪೈಕಿ ಯಾರೊಬ್ಬರೂ ನಾಮಪತ್ರ ಸಲ್ಲಿಸಲಿಲ್ಲ. ಮಧ್ಯಾಹ್ನ 12ರ ಬಳಿಕವೇ ನಾಮಪತ್ರಗಳು ಸಲ್ಲಿಕೆಯಾದವು. 1.30 ರಿಂದ 3ರವರೆಗೆ ಗುಳಿಕ ಕಾಲವಿತ್ತು. ಈ ಅವಧಿಯಲ್ಲಿ ಕುಮಾರಸ್ವಾಮಿ ದಂಪತಿ ಸೇರಿದಂತೆ ಕೆಲವರು ಉಮೇದುವಾರಿಕೆ ಸಲ್ಲಿಸಿದ್ದಾರೆ.
ಕಾದು ಕುಳಿತ ಅಭ್ಯರ್ಥಿ: ರಾಮನಗರ ಕಾಂಗ್ರೆಸ್ ಅಭ್ಯರ್ಥಿ ಮರಿದೇವರು ಚುನಾವಣಾಧಿಕಾರಿ ಕಚೇರಿಗೆ ಆಗಮನವಾದಾಗ ಇನ್ನೂ ಯಮಗಂಡ ಕಾಲವಿತ್ತು. ಜ್ಯೋತಿಷ್ಯ ವಾಣಿಯಂತೆ ಮಧ್ಯಾಹ್ನ 12.20ಕ್ಕೆ ನಾಮಪತ್ರ ಸಲ್ಲಿಸಬೇಕೆಂದಿದ್ದ ಅವರು ಸುಮಾರು 30 ನಿಮಿಷವನ್ನು ಕಚೇರಿ ಒಳಗೆ ದೂಡಿದರು. ಇಷ್ಟಲ್ಲದೆ, ಹಣೆಯಲ್ಲಿ ಚಾಮುಂಡೇಶ್ವರಿ ದೇಗುಲದ ಕುಂಕುಮ ಹಚ್ಚಿಸಿಕೊಂಡು, ಮಸೀದಿಯಲ್ಲಿ ಕರುಣಿಸಿದ್ದ ಹಸಿರು ಬಟ್ಟೆ ಕಟ್ಟಿಕೊಂಡಿದ್ದರು. ಕೈಯಲ್ಲಿದ್ದ ನಿಂಬೆ ಹಣ್ಣನ್ನು ಮಾಧ್ಯಮಗಳ ಕಣ್ಣಿಗೆ ಬೀಳುತ್ತಿದ್ದಂತೆಯೇ ಜೇಬಿಗೆ ಇಳಿಸಿದರು.
ಅವಳಿ ಕ್ಷೇತ್ರಗಳಾದ ರಾಮನಗರ, ಚನ್ನಪಟ್ಟಣದಲ್ಲಿ ಜೆಡಿಎಸ್ ಪಕ್ಷದಿಂದ ಕ್ರಮವಾಗಿ ಸ್ಪರ್ಧೆಗೆ ಇಳಿದಿರುವ ಕುಮಾರಸ್ವಾಮಿ ಮತ್ತು ಅನಿತಾ ಕುಮಾರ ದಂಪತಿ ಕೂಡ ಕಾರ್ಯಕರ್ತರು ಕಾದು ಬಸವಳಿಯುವವರೆಗೂ ಸತಾಯಿಸಿದರು. ಮಧ್ಯಾಹ್ನ 12.30ಕ್ಕೆ ನಾಮಪತ್ರ ಸಲ್ಲಿಕೆ ನಿಗದಿಪಡಿಸಿಕೊಂಡಿದ್ದ ಅನಿತಾ ಕುಮಾರಸ್ವಾಮಿ ಆ ವೇಳೆಗಿನ್ನೂ ಚನ್ನಪಟ್ಟಣವನ್ನೇ ತಲುಪಿರಲಿಲ್ಲ. ಚನ್ನಪಟ್ಟಣದಲ್ಲಿ ಒಟ್ಟಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡರಾದರೂ ನಾಮಪತ್ರ ಸಲ್ಲಿಸಲು ಪ್ರತ್ಯೇಕಗೊಂಡರು.
ದಳಪತಿ ದಾರಿ ಬದಲು : ದಳಪತಿ ಎಚ್.ಡಿ.ಕುಮಾರಸ್ವಾಮಿ ಅವರು ರಾಮನಗರದಲ್ಲಿ ಹಿಂದೆ ಎರಡು ಬಾರಿ ಆಯ್ಕೆಗೊಂಡಾಗಲೂ ನಾಮಪತ್ರ ಸಲ್ಲಿಸುವ ಮುನ್ನವೇ ನಗರದ ಶಕ್ತಿ ದೇವತೆ ಚಾಮುಂಡೇಶ್ವರಿ, ಮುಖ್ಯ ರಸ್ತೆಯಲ್ಲಿರುವ ದರ್ಗಾ ಹಾಗೂ ಲೂರ್ದು ಮಾತೆ ಚರ್ಚ್‌ಗೆ ತೆರಳಿ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಆದರೆ, ಈ ಬಾರಿ ವಿಳಂಬ ಆಗಮನದ ಪರಿಣಾಮ ಮೊದಲು ನಾಮಪತ್ರ ಸಲ್ಲಿಸಿ, ಬಳಿಕ ರೋಡ್ ಶೋ ಮೂಲಕ ಪೂಜೆ, ಪ್ರಾರ್ಥನೆಗೆ ತೆರಳಿದರು. ತಮ್ಮ ಭಾಷಣದಲ್ಲಿ ಅಲ್ಪ ಸಂಖ್ಯಾತ ಮುಸ್ಲಿಮರ ಸ್ತುತಿ ಮಾಡಿದರು.
ಪ್ರಸಾದದ ಚೀಲದಲ್ಲಿ ಹಣ: ಕಾಂಗ್ರೆಸ್ ಧುರೀಣ ಡಿ.ಕೆ.ಶಿವಕುಮಾರ್ ಕೂಡ ಅಪ್ಪಟ ದೈವಭಕ್ತ ಮತ್ತು ಜ್ಯೋತಿಷ್ಯದ ಮೊರೆ ಹೊಕ್ಕ ರಾಜಕಾರಣಿ. ಅವರು ಠೇವಣಿ ಹಣವನ್ನು ದೇವರ ಪ್ರಸಾದವಿದ್ದ ಚೀಲವೊಂದರಲ್ಲಿ ತಂದಿದ್ದರು.  ಸಲ್ಲಿಕೆಗೂ ಮುನ್ನ ನಾಮಪತ್ರವನ್ನು ಹಣೆ ಒತ್ತಿಕೊಂಡು, ನಮಸ್ಕರಿಸಿದರು. ಉದ್ಯಮ ಹಾಗೂ ರಾಜಕಾರಣದಲ್ಲಿ ಶಿವಕುಮಾರ್ ಅವರಿಗೆ ಸಾಥ್ ನೀಡುತ್ತಲೇ ಬಂದಿರುವ ಡಿ.ಕೆ.ಸುರೇಶ್ ಕೂಡ ಪಕ್ಷೇತರರಾಗಿ ಒಂದು ನಾಮಪತ್ರ ಸಲ್ಲಿಸಿದ್ದಾರೆ.  
ಕನಕಪುರದಲ್ಲಿ ಶಿವಕುಮಾರ್ ಅವರ ವಿರಾಟ್  ಪ್ರದರ್ಶನವಿತ್ತಾದರೂ ಎದುರಾಳಿಯಾದ ಜೆಡಿಎಸ್ ಅಭ್ಯರ್ಥಿ ಸಿಂಧ್ಯಾ ಸೀಮಿತ ಸಂಖ್ಯೆಯ ಬೆಂಬಲಿಗರೊಂದಿಗೆ ಉಮೇದುವಾರಿಕೆ ಸಲ್ಲಿಸಿದರು. ಕನಕಪುರದಲ್ಲಿ ಬಂದೋಬಸ್ತ್ ನಡುವೆಯೂ ನೂಕುನುಗ್ಗಲ ಉಂಟಾಯಿತು. ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ, ಕಾಂಗ್ರೆಸ್ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾದರು.
ಮೂಡಿದ ರಣೋತ್ಸಾಹ:  ಜಿಲ್ಲೆಯ ಸಾಂಪ್ರದಾಯಿಕ ಎದುರಾಳಿಗಳ ಪೈಕಿ ಜೆಡಿಎಸ್ಪ್‌ಕ್ಷದಿಂದ ಎಲ್ಲ 4 ಕ್ಷೇತ್ರಗಳಲ್ಲಿ, ಕಾಂಗ್ರೆಸ್ ಪಕ್ಷದಿಂದ ಚನ್ನಪಟ್ಟಣ ಹೊರತಾಗಿ 3 ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆಯಾಯಿತು. ಕೆಜೆಪಿ, ಬಿಜೆಪಿ ಅಭ್ಯರ್ಥಿಗಳೂ ನಾಮಪತ್ರ ಸಲ್ಲಿಸಿದ್ದಾರೆ. ನಾಲ್ಕು ತಾಲೂಕು ಕೇಂದ್ರಗಳಲ್ಲೂ ಜನಸ್ತೋಮವೇ ಕಂಡು ಬಂದಿತು. ಕಾರ್ಯಕರ್ತರಲ್ಲಿ ಹುಮ್ಮಸ್ಸು, ಹುರಿಯಾಳುಗಳಲ್ಲಿ ರಣೋತ್ಸಾಹ ಕಂಡು ಬಂದಿತು.

-ಮತ್ತೀಕೆರೆ ಜಯರಾಮ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement