ಚನ್ನಪಟ್ಟಣದಲ್ಲಿ ಸಾದತ್ ಆಲಿಖಾನ್ ನಾಮಪತ್ರ
ಕ.ಪ್ರ. ವಾರ್ತೆ ರಾಮನಗರ ಏ.16
ಚನ್ನಪಟ್ಟಣ ಕ್ಷೇತ್ರದ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಸಾದತ್ ಆಲಿಖಾನ್ ಸೇರಿದಂತೆ ಜಿಲ್ಲೆಯಲ್ಲಿ ಮಂಗಳವಾರ 14 ಅಭ್ಯರ್ಥಿಗಳು 16 ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಸೋಮವಾರವೂ 3 ನಾಮಪತ್ರಗಳನ್ನು ಸಲ್ಲಿಸಿದ್ದ ಕನಕಪುರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಶಿವಕುಮಾರ್ ಮಂಗಳವಾರ ಸಹ ಮತ್ತೊಂದು ನಾಮಪತ್ರ ಹಾಕಿದರು.
ಮಾಗಡಿ ಕ್ಷೇತ್ರದಲ್ಲಿ ಇಬ್ಬರು ಅಭ್ಯರ್ಥಿಗಳು ತಲಾ 1 ನಾಮಪತ್ರ, ರಾಮನಗರದಲ್ಲಿ 4 ಮಂದಿ ಅಭ್ಯರ್ಥಿಗಳು 4 ನಾಮಪತ್ರಗಳನ್ನು, ಕನಕಪುರದಲ್ಲಿ ಇಬ್ಬರು ಅಭ್ಯರ್ಥಿಗಳು 3 ನಾಮಪತ್ರಗಳನ್ನು, ಚನ್ನಪಟ್ಟಣದಲ್ಲಿ 6 ಮಂದಿ ಅಭ್ಯರ್ಥಿಗಳು 7 ನಾಮಪತ್ರಗಳನ್ನು ಸಲ್ಲಿಸಿದರು.
ಚನ್ನಪಟ್ಟಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಾದತ್ ಆಲಿಖಾನ್ ಹೆಸರು ಘೋಷಣೆಯಾಗಿತ್ತಾದರೂ ಬಿ ಫಾರಂ ವಿತರಣೆ ವಿಳಂಬವಾಗಿತ್ತು. ಸೋಮವಾರ ತಡರಾತ್ರಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಅವರಿಂದ ಬಿ ಫಾರಂ ಪಡೆದಿದ್ದ ಸಾದತ್ ಆಲಿಖಾನ್ ಮಂಗಳವಾರ ಚನ್ನಪಟ್ಟಣಕ್ಕೆ ಆಗಮಿಸಿದರು.
ಮೆರವಣಿಗೆ, ಜನಜಾತ್ರೆ ಮೊರೆ ಹೋಗದ ಸಾದತ್ ಆಲಿಖಾನ್ ಕೆಲವೇ ಮುಖಂಡರು ಮತ್ತು ಆಪ್ತರೊಂದಿಗೆ ಚುನಾವಣಾಧಿಕಾರಿ ಕಚೇರಿಗೆ ಆಗಮಿಸಿ ದ್ವಿಪ್ರತಿಯಲ್ಲಿ ನಾಮಪತ್ರ ಸಲ್ಲಿಸಿದರು. ಇದರೊಂದಿಗೆ ಚನ್ನಪಟ್ಟಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುರಿತ ಗೊಂದಲಕ್ಕೆ ತೆರೆ ಬಿದ್ದಂತಾಗಿದೆ.
ಇವರಲ್ಲದೆ ಚನ್ನಪಟ್ಟಣ ಕ್ಷೇತ್ರದಿಂದ ಬಿಎಸ್‌ಪಿ ಅಭ್ಯರ್ಥಿಯಾಗಿ ವಿ.ಎಸ್.ಸುಜೀವನ್‌ಕುಮಾರ್, ಪಕ್ಷೇತರರಾಗಿ ಎಸ್.ಆರ್.ಜೈಕಿಸಾನ್, ಜೆ.ಟಿ.ಪ್ರಕಾಶ್, ಎಂ.ಯೋಗೇಶ, ಜುಲ್ಫೀಕರ್ ಮೆಹದಿ ತಲಾ ಒಂದು ನಾಮಪತ್ರ ಸಲ್ಲಿಸಿದ್ದಾರೆ.
ರಾಮನಗರ ಸ್ಪರ್ಧಿಗಳು: ಪ್ರತಿಷ್ಠಿತ ರಾಮನಗರ ಕ್ಷೇತ್ರದಲ್ಲಿ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ(ಆರ್‌ಪಿಐ) ಪಕ್ಷದಿಂದ ಜಿ.ಗೋವಿಂದಯ್ಯ ಅವರು ಮೆರವಣಿಗೆ ಮೂಲಕ ಆಗಮಿಸಿ ತಹಸೀಲ್ದಾರ್ ಹಾಗೂ ಸಹಾಯಕ ಚುನಾವಣಾಧಿಕಾರಿ ಹನುಮಂತರಾಯಪ್ಪ ಅವರಿಗೆ ಉಮೇದುವಾರಿಕೆ ಅರ್ಜಿ ನೀಡಿದರು. ಙಕೆಜೆಪಿ ಅಭ್ಯರ್ಥಿ ಎಸ್.ಆರ್.ನಾಗರಾಜು ಮತ್ತು ಎಸ್‌ಡಿಪಿಐ ಪಕ್ಷದಿಂದ ಫೈರೋಜ್ ಆಲಿಖಾನ್, ಅವರು ಪ್ರತ್ಯೇಕವಾಗಿ ಮೆರವಣಿಗೆ ಮೂಲಕ ಆಗಮಿಸಿ ನಾಮಪತ್ರ ಸಲ್ಲಿಸಿದರು. ಪಕ್ಷೇತರ ಕಾಂತರಾಜು ಕೂಡ ಬೆಂಬಲಿಗರೊಂದಿಗೆ ಆಗಮಿಸಿ ನಾಮಪತ್ರ ಹಾಕಿದರು.
ಇತರೆಡೆ ನಾಮಪತ್ರ: ಮಾಗಡಿ ಕ್ಷೇತ್ರದಲ್ಲಿ ಸಂಯುಕ್ತ ಜನತಾದಳ ಅಭ್ಯರ್ಥಿ ಕೆ.ರಮೇಶ್, ಪಕ್ಷೇತರ ಆರ್.ಎನ್. ಗುರುಪ್ರಸಾದ್ ತಲಾ 1 ನಾಮಪತ್ರ ಸಲ್ಲಿಸಿದರು. ಕನಕಪುರ ಕ್ಷೇತ್ರದಿಂದ ಬಿಎಸ್‌ಪಿ ಅಭ್ಯರ್ಥಿ ಮಲ್ಲಿಕಾರ್ಜುನಯ್ಯ 2 ಸೆಟ್ ನಾಮಪತ್ರ ಹಾಕಿದರೆ, ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್ ಈ ದಿನವೂ ಒಂದು ಪ್ರತಿ ನಾಮಪತ್ರ ಸಲ್ಲಿಸಿದರು.
ಇದರೊಂದಿಗೆ ಜಿಲ್ಲೆಯಲ್ಲಿ ಮಂಗಳವಾರಾಂತ್ಯಕ್ಕೆ ಒಟ್ಟಾರೆ 36 ಅಭ್ಯರ್ಥಿಗಳು 58 ನಾಮಪತ್ರಗಳನ್ನು ಸಲ್ಲಿಸಿದಂತಾಗಿದೆ. ಚನ್ನಪಟ್ಟಣದಲ್ಲಿ 12 ಅಭ್ಯರ್ಥಿಗಳು 16 ನಾಮಪತ್ರಗಳನ್ನು, ರಾಮನಗರದಲ್ಲಿ 6 ಅಭ್ಯರ್ಥಿಗಳು 11 , ಕನಕಪುರದಲ್ಲಿ 11 ಅಭ್ಯರ್ಥಿಗಳು 19 ಹಾಗೂ ಮಾಗಡಿಯಲ್ಲಿ 7 ಅಭ್ಯರ್ಥಿಗಳು 12 ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆಗೆ ನಾಳೆ(ಏ.17) ಕಡೆಯ ದಿನವಾಗಿದ್ದು, ಮತ್ತಷ್ಟು ನಾಮಪತ್ರಗಳ ಸುರಿಮಳೆ ಸಾಧ್ಯತೆ ಇದೆ.