ಸುದ್ದಿ ಸಂಕ್ಷೇಪ
ನೆಲಮಂಗಲ: 7 ಮಂದಿ ನಾಮಪತ್ರ ಸಲ್ಲಿಕೆ
ನೆಲಮಂಗಲ: ನೆಲಮಂಗಲ ವಿಧಾನ ಸಭಾ ಮೀಸಲು ಕ್ಷೇತ್ರದಲ್ಲಿ ಮೇ 5 ರಂದು ನಡೆಯಲಿರುವ ಚುನಾವಣೆಯ ಉಮೇದುವಾರಿಕೆ ಪ್ರಾರಂಭವಾಗಿ 7ನೇ ದಿನಕ್ಕೆ ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಕೆಜೆಪಿ ತಲಾ ಒಬ್ಬೊಬ್ಬ ಅಭ್ಯರ್ಥಿ ಸೇರಿದಂತೆ 4 ಮಂದಿ ಪಕ್ಷೇತರರು ಸೇರಿ ಇದುವರೆಗೂ ಒಟ್ಟು 7 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಏಪ್ರಿಲ್ 15 ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಂಡು ಸೋಮವಾರ 3 ರಾಜಕೀಯ ಪಕ್ಷಗಳ ಅಭ್ಯರ್ಥಿ ಮತ್ತು ಒಬ್ಬ ಸ್ವತಂತ್ರ ಅಭ್ಯರ್ಥಿ ನಾಮಪತ್ರವನ್ನು ಸಲ್ಲಿಸಿದರು. ಮಂಗಳವಾರ ಅಂಜನಮೂರ್ತಿ.ಬಿ, ತಿರುಮಲಯ್ಯ ಮತ್ತು ಶಿವಪ್ರಸಾದ್ ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದರು.
ಗ್ರಾಮೀಣ ಜಾತ್ರೆಗಳು ಜನರ ಬದುಕಿನ ಜೀವನಾಡಿಯಿದ್ದಂತೆ
ಮಾಗಡಿ: ಗ್ರಾಮೀಣ ಜಾತ್ರೆಗಳು ಜನರ ಬದುಕಿನ ಜೀವನಾಡಿಯಿದ್ದಂತೆ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ನುಡಿದರು. ಅವರು ತಾಲೂಕಿನ ಪ್ರಸಿದ್ಧ ಕರಡಿಗುಚ್ಚಮ್ಮ ಜಾತ್ರೆಯಲ್ಲಿ ದೇವಿ ಕುರ್ಜುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಕುರ್ಜು ಎಳೆದು ಜಾತ್ರೆಗೆ ಚಾಲನೆ ನೀಡಿದರು. ಅವರು ಕರಡಿಗುಚ್ಚಮ್ಮ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಕಾಂಗ್ರೆಸ್ ಅಭ್ಯರ್ಥಿ ಎ.ಮಂಜು, ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹಾಗೂ ಕೆಜೆಪಿ ಅಭ್ಯರ್ಥಿ ಎಚ್.ಎಂ. ಕೃಷ್ಣಮೂರ್ತಿ ಸೇರಿದಂತೆ ಸಹಸ್ರಾರು ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಕುರ್ಜು ಎಳೆದು ಪುನೀತರಾದರು.
ದೊಡ್ಡಬಳ್ಳಾಪುರದ ವಿವಿಧೆಡೆ ದೇವರ ದಾಸಿಮಯ್ಯ ಜಯಂತಿ
ದೊಡ್ಡಬಳ್ಳಾಪುರ: ನಗರದ ಶಾಂತಿನಗರ, ದರ್ಗಾಜೋಗಿಹಳ್ಳಿ, ಕರೇನಹಳ್ಳಿ, ಸಂಜಯನಗರ, ಕೊಂಗಾಡಿಯಪ್ಪ ಮುಖ್ಯರಸ್ತೆ, ಕಾಲೇಜು ರಸ್ತೆ ಸೇರಿದಂತೆ ಅನೇಕ ಬಡಾವಣೆಗಳಲ್ಲಿ ದೇವರ ದಾಸಿಮಯ್ಯ ಜಯಂತ್ಯುತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಶಾಂತಿನಗರ 7ನೇ ಕ್ರಾಸ್ನಲ್ಲಿರುವ ಶ್ರೀದೇವರದಾಸಿಮಯ್ಯ ಮಿತ್ರ ಮಂಡಲಿ ನೇತೃತ್ವದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು. ರಾಮಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇವಾಂಗ ಮಂಡಲಿ ಅಧ್ಯಕ್ಷ ಎಂ.ಜಿ.ಶ್ರೀನಿವಾಸ್, ತೆಲುಗು ದೇವಾಂಗ ಸಂಘದ ಅಧ್ಯಕ್ಷ ಎಂ.ಕೃಷ್ಣಮೂರ್ತಿ, ಗಾಯತ್ರಿ ಪೀಠ ಮಿತ್ರ ಬಳಗದ ಶಿವಾನಂದ, ನಗರಸಭಾ ಸದಸ್ಯ ಕೆ.ಜಿ.ರಘುರಾಂ, ದರ್ಗಾಜೋಗಳ್ಳಿ ಪಂಚಾಯಿತಿ ಮಾಜಿ ಅಧ್ಯಕ್ಷ ನಂಜುಂಡಪ್ಪ, ಜೆ.ವೈ.ಮಲ್ಲಪ್ಪ, ನಾಗಭೂಷಣ್, ಉಪಾಧ್ಯಕ್ಷ ತಿಮ್ಮರಾಜು, ಸದಸ್ಯ ವೆಂಕಟೇಶ್ ಸೇರಿದಂತೆ ಅನೇಕರು ಭಾಗವಹಿಸಿದ್ದರು. ದರ್ಗಾಜೋಗಿಹಳ್ಳಿಯ ಶ್ರೀದೇವರ ದಾಸಿಮಯ್ಯ ದೇವಾಂಗ ಸಂಘದ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಂ.ಕೃಷ್ಣಮೂರ್ತಿ, ತಿಮ್ಮರಾಜು, ವೆಂಕಟೇಶ್, ರವಿಕಿರಣ್ ಮತ್ತಿತರರು ಮಾತನಾಡಿದರು. ದೇವಲ ಮಹರ್ಷಿ ಮತ್ತು ದೇವರ ದಾಸಿಮಯ್ಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಅದೇ ರೀತಿ ಕರೇನಹಳ್ಳಿಯ ವರಸಿದ್ಧಿ ವಿನಾಯಕ ಗೆಳಯರ ಸಾಂಸ್ಕೃತಿಕ ಸಂಘ ಸೇರಿದಂತೆ ಅನೇಕ ಸಂಘಟನೆಗಳಿಂದ ದೇವರ ದಾಸಿಮಯ್ಯ ಜಯಂತ್ಯುತ್ಸವ ಆಚರಿಸಲಾಯಿತು. ಅನೇಕ ಗಣ್ಯರು ಭಾಗವಹಿಸಿದ್ದರು.
ಕೃಷಿ ನೋಟ್ ಬಿಡುಗಡೆ ಕಾರ್ಯಕ್ರಮ
ವಿಜಯಪುರ: ಪಟ್ಟಣದ ಚನ್ನಕೇಶವ ಸ್ವಾಮಿ ದೇವಾಲಯದ ಆವರಣದಲ್ಲಿ ಕೃಷಿ ನೋಟ್ ಬಿಡುಗಡೆ ಮಾಡಲಾಯಿತು. ಮಾಜಿ ಸಂಸದ ಸಿ.ನಾರಾಯಣಸ್ವಾಮಿ ಮಾತನಾಡಿ ಕೃಷಿಗೆ ಆದ್ಯತೆ ನೀಡುವ ಸಲುವಾಗಿ ಹೊರತಂದಿರುವ ಕೃಷಿ ನೋಟ್ ಪತ್ರಿಕೆ ರೈತನ ಮಿತ್ರನಾಗಲಿ ಎಂದು ತಿಳಿಸಿದರು. ಜಿ.ಪಂ.ಸದಸ್ಯ ರಾಜಣ್ಣ ಮತ್ತು ಜೆಡಿಎಸ್ ರಾಜ್ಯ ಎಸ್ಸಿ ಘಟಕದ ಉಪಾಧ್ಯಕ್ಷ ಪಿಳ್ಳಮುನಿಶ್ಯಾಮಪ್ಪ ಮಾತನಾಡಿದರು. ಜೆಡ್ಎಸ್ ಟೌನ್ ಅಧ್ಯಕ್ಷ ಎನ್.ನಾರಾಯಣಸ್ವಾಮಿ, ತಾ.ಕಾರ್ಯದರ್ಶಿ ಜಿ.ರವೀಂದ್ರ, ಮುಖಂಡರಾದ ಚಿ.ಮಾ.ಸುಧಾಕರ್, ನಲ್ಲೂರು ವೆಂಕಟೇಗೌಡ, ಬಿಜೆಪಿ ತಾಲೂಕು ಅಧ್ಯಕ್ಷ ಹನುಮಂತರಾ ಯಪ್ಪ, ಪತ್ರಿಕೆ ಸಂಪಾದಕ ಮಲ್ಲೇನಹಳ್ಳಿ ಹನುಮೇಶ್, ಭೂನ್ಯಾಯ ಮಂಡಳಿ ಸದಸ್ಯ ಡಿ.ಆರ್.ನಾರಾಯಣ ಸ್ವಾಮಿ, ಭಾರತ ಜನ ಜಾಗೃತಿ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಅಶ್ವತ್ಥಪ್ಪ ಉಪಸ್ಥಿತರಿದ್ದರು.
6 ಮಂದಿಯಿಂದ 7 ನಾಮಪತ್ರ
ಚನ್ನಪಟ್ಟಣ: ನಾಮಪತ್ರ ಸಲ್ಲಿಕೆಯ ಕೊನೆಯ ದಿನದ ಮುನ್ನಾ ದಿನವಾದ ಮಂಗಳವಾರ 6 ಮಂದಿ 7 ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಸಾದತ್ ಆಲಿಖಾನ್ ಸ್ಪರ್ಧಿಸಿದರೆ, ಬಿಎಸ್ಪಿ ಅಭ್ಯರ್ಥಿಯಾಗಿ ಸುಜೀವನ್ಕುಮಾರ್ ನಾಮಪತ್ರ ಸಲ್ಲಿಸಿದರು. ಜುಲ್ಫಿಕರ್ ಆಲಿಮೆಹದಿ, ಜೆ.ಟಿ.ಪ್ರಕಾಶ್, ಜಯಕಿಸಾನ್, ಯೋಗೀಶ್ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಅಕ್ರಮ ಮರಳು ದಂಧೆ: ಮೂವರ ಬಂಧನ
ನೆಲಮಂಗಲ: ಸಮೀಪದ ಕಣೇಗೌಡನಹಳ್ಳಿ ಕೆರೆಯಲ್ಲಿ ಅಕ್ರಮವಾಗಿ ಮರಳು ದಂಧೆ ನಡೆಸುತ್ತಿದ್ದ ತಂಡದ ಮೇಲೆ ತಹಸೀಲ್ದಾರ್ ವಿ.ರಾಜೇಂದ್ರ ಹಠಾತ್ ದಾಳಿ ಮಾಡಿ ಜೆಸಿಬಿ ಯಂತ್ರಮತ್ತು 3 ಮಂದಿಯನ್ನು ಬಂಧಿಸಿದ್ದಾರೆ. ಕೆರೆಯಲ್ಲಿ ಸಾಮಾನ್ಯವಾಗಿ ಮರಳು ಫಿಲ್ಟರ್ಗಾಗಿ ಮಣ್ಣನ್ನು ಮೇಲೆತ್ತಿ ಸಾಗಿಸಲಾಗುತ್ತಿದೆ. ಈ ರೀತಿ ಮರಳು ಸಾಗಿಸಲು ಯಾವುದೇ ರೀತಿಯ ಅನುಮತಿಯನ್ನು ಪಡೆದಿಲ್ಲ. ಅನಧಿಕೃತವಾಗಿ ಮಣ್ಣನ್ನು ಸಾಗಿಸಿ ನೀರಿನಿಂದ ಫಿಲ್ಟರ್ ಮಾಡಿ ಈ ರೀತಿ ತಯಾರಿಸಿದ ಮರಳನ್ನು ಹೆಚ್ಚಿನ ಲಾಭಕ್ಕೆ ಮಾರಾಟ ಮಾಡುವ ದಂಧೆ ಆಗಿಂದಾಗ್ಗೆ ನಡೆಯುತ್ತಿದೆ. ಚುನಾವಣೆಯ ಸಮಯವಾಗಿರುವುದರಿಂದ ಅಧಿಕಾರಿಗಳು ಮತ್ತು ರಾಜಕಾರಣಿಗಳ ಗಮನ ಚುನಾವಣೆ ನಡೆಸುವ ಬಗ್ಗೆ ಇರುವುದನ್ನು ಮನಗಂಡ ಮರಳು ದಂಧೆಕೋರರು ಈ ಕೃತ್ಯದಲ್ಲಿ ಪಳಗಿರುವ ಬಗ್ಗೆ ಸಾರ್ವಜನಿಕವಾಗಿ ದೂರುಗಳು ಬಂದ ಮೇರೆಗೆ ತಹಸೀಲ್ದಾರ್ ದಾಳಿ ನಡೆಸಿ ಯಂತ್ರಗಳು ಹಾಗೂ 3 ಮಂದಿ ಬಂಧಿಸಿರುವುದಾಗಿ ತಿಳಿಸಿದರು.
ಸೀತಾರಾಮ ತಿರುಕಲ್ಯಾಣೋತ್ಸವ
ವಿಜಯಪುರ: ಶ್ರೀರಾಮನವಮಿ ಹಬ್ಬದ ಪ್ರಯುಕ್ತ ಸತತ 3ನೇ ವರ್ಷದ ಶ್ರೀರಾಮ ನಾಮ ತಾರಕ ಮಹಾಹೋಮ ಮತ್ತು ಪ್ರಥಮ ಶ್ರೀ ಸೀತಾರಾಮ ತಿರುಕಲ್ಯಾಣೋತ್ಸವವು ನಡೆಯಲಿದೆ. ತಿರುಕಲ್ಯಾಣೋತ್ಸವವು ಏ. 19ರಂದು ಇಲ್ಲಿನ ಅಶೋಕ ನಗರದ ಮಾರುತಿ ಸರ್ಕಲ್ನಲ್ಲಿರುವ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ಏರ್ಪಡಿಸಲಾಗಿದೆ.
ದೇವನಹಳ್ಳಿ ಒಟ್ಟು 9 ನಾಮಪತ್ರ ಸಲ್ಲಿಕೆ
ದೇವನಹಳ್ಳಿ: ದೇವನಹಳ್ಳಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಒಟ್ಟು 9 ನಾಮಪತ್ರ ಸಲ್ಲಿಕೆಯಾಗಿವೆ ಎಂದು ಚುನಾವಣಾಧಿಕಾರಿಗಳಾದ ಆರ್.ಸುಮ ತಿಳಿಸಿದ್ದಾರೆ. ಕಾಂಗ್ರೆಸ್ನಿಂದ ಶಾಸಕ ವೆಂಕಟಸ್ವಾಮಿ, ಜೆಡಿಎಸ್ ಪಿಳ್ಳಮುನಿಶಾಮಪ್ಪ, ಬಿ.ಕೆ.ಶಿವಪ್ಪ ಹಾಗೂ ದೊಡ್ಡಬಳ್ಳಾಪುರದ ಡಿ.ಮುನಿರಾಜು ತಲಾ 2 ನಾಮಪತ್ರಗಳನ್ನು ಹಾಗೂ ರಾಮಾನಾಯ್ಕ್ ಒಂದು ನಾಮಪತ್ರ ಸೇರಿ ಒಟ್ಟು 9 ನಾಮಪತ್ರ ಸಲ್ಲಿಕೆಯಾಗಿವೆ.