ನೆಲಮಂಗಲ: 22 ಮಂದಿ ನಾಮಪತ್ರ
ನೆಲಮಂಗಲ: ನೆಲಮಂಗಲ ವಿಧಾನಸಭಾ ಮೀಸಲು ಕ್ಷೇತ್ರಕ್ಕೆ ಮೇ 5ರಂದು ನಡೆಯಲಿರುವ ಚುನಾವಣೆಗೆ ಏಪ್ರಿಲ್ 17ರ ಬುಧವಾರ ಕೊನೆ ದಿನವಾಗಿದ್ದರಿಂದ 15 ಮಂದಿ ಒಮ್ಮೆಗೆ ಚುನಾವಣೆ ಕಚೇರಿಗೆ ಬಂದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಲು ತಮ್ಮ ಸರದಿಗೆ ಕಾದು ಕುಳಿತು ನಾಮಪತ್ರ ಸಲ್ಲಿಸಿದರು.
ಜೆಡಿಎಸ್ ಅಭ್ಯರ್ಥಿ ಡಾ. ಶ್ರೀನಿವಾಸಮೂರ್ತಿ ಶಿವಗಂಗೆಯ ಗಣೇಶನಿಗೆ ಪೂಜೆ ಸಲ್ಲಿಸಿ ನೆಲಮಂಗಲ ಪಟ್ಟಣದ ತಿಮ್ಮಶೆಟ್ಟಪ್ಪ ಲೇಔಟ್ನಲ್ಲಿರುವ ಶ್ರೀ ಆಂಜನೇಯ ದೇವಾಲಯದ ಬಳಿಯಿಂದ ಜೆ.ಡಿ.ಎಸ್ ತಾಲೂಕು ಅಧ್ಯಕ್ಷ ಶಾಸಕ ಇ.ಕೃಷ್ಣಪ್ಪ ಪ್ರಮುಖ ನಾಯಕರಾದ ಕೇಶವಮೂರ್ತಿ, ಗಂಗಣ್ಣ, ಟಿ.ಆರ್.ರಾಜು, ಜಿ.ಪಂ.ಸದಸ್ಯ ಕಾಂತರಾಜು ಸೇರಿದಂತೆ ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಸಾಗಿ ನಾಮಪತ್ರ ಸಲ್ಲಿಸಿದರು.
ಬಿ.ಜೆ.ಪಿ ಅಭ್ಯರ್ಥಿ ನಾಗರಾಜು ಅವರಿಂದ ಪ್ರಾರಂಭವಾಗಿ ಕೊನೆ ದಿನವಾದ ಬುಧವಾರ ಒಂದೇ ದಿನ ವಿವಿಧ ಪಕ್ಷಗಳ ಅಭ್ಯರ್ಥಿಗಳು ಮತ್ತು ಬಂಡಾಯ ಅಭ್ಯರ್ಥಿಗಳು ಸೇರಿದಂತೆ 22 ಮಂದಿ ನಾಮಪತ್ರ ಸಲ್ಲಿಸಿದರು.
ಸರ್ಕಾರಿ ನೌಕರರ ರಾಜ್ಯ ಸಂಘದ ಖಜಾಂಚಿಯಾಗಿದ್ದ ಚೌಡಯ್ಯ ತಮ್ಮ ವೃತ್ತಿಗೆ ರಾಜಿನಾಮೆ ನೀಡಿ ಕೆ.ಜೆ.ಪಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಭಾರತೀಯ ಪ್ರಜಾಪಕ್ಷದಿಂದ ವಕೀಲ ರಾಮಯ್ಯ, ಬಿ.ಎಸ್ಪಿ ಪಕ್ಷದಿಂದ ಡಾ.ಪಿ.ಹನುಮಯ್ಯ, ಜೆಡಿಯು ಪಕ್ಷದಿಂದ ಗೊಟ್ಟಿಗೆರೆಯ ಲೇಪಾಕ್ಷಿ, ಬಿ.ಎಸ್.ಆರ್ ಪಕ್ಷದಿಂದ ರಾಮಪ್ಪ, ಕೆ.ಜೆ.ಪಿ ಪಕ್ಷದಿಂದ ಬಂಡಾಯವಾಗಿ ಮತ್ತೊಬ್ಬ ಅಭ್ಯರ್ಥಿ ಗಂಗರಾಮಯ್ಯ, ಸೋಲೂರಿನ ಪೆದ್ದಣ್ಣ, ಸತೀಶ್ ಚಂದ್ರ, ಪಿ.ಮಹದೇವ, ಎಂ.ರುದ್ರೇಶ್, ಜಿ.ಕುಮಾರ್, ಎನ್.ಜಿ.ಪೂಜಪ್ಪ, ಗಂಗಬೈಲಪ್ಪ, ರಾಮಯ್ಯ ನಾಮಪತ್ರ ಸಲ್ಲಿಸಿದ ಹುರಿಯಾಳುಗಳು.