ಅಭಿವೃದ್ಧಿ ಕೆಲಸ ಗಮನಿಸಿ ಉತ್ತಮ ಅಭ್ಯರ್ಥಿ ಆಯ್ಕೆ
ಕ.ಪ್ರ.ವಾರ್ತೆ ಕನಕಪುರ ಏ. 18
ಮತದಾನದ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿದೆ, ಹಣ, ಹೆಂಡ, ಪ್ರಭಾವಗಳಿಗೆ ತುತ್ತಾಗಿ ತಮ್ಮ ಮತಗಳನ್ನು ಮಾರಿ ಕೊಳ್ಳುವುದಿಲ್ಲವೆಂಬ ಭರವಸೆಯಿದೆ, ಜನಪರ ಕಾರ್ಯಗಳು, ಅಭಿವೃದ್ಧಿ ಕೆಲಸಗಳನ್ನು ಗಮನಿಸಿ ಉತ್ತಮ ಅಭ್ಯರ್ಥಿಯನ್ನು ಈ ಚುನಾವಣೆಯಲ್ಲಿ ಕನಕಪುರದ ಮತದಾರರು ಆರಿಸುತ್ತಾರೆ ಎಂದು ಮಾಜಿ ಸಚಿವ ಪಿಜಿಆರ್ಸಿಂಧ್ಯಾ ಹೇಳಿದ್ದಾರೆ.
ಅವರು ಕನಕಪುರ ತಾಲೂಕು ಕೂತಗಾನಹಳ್ಳಿ ಗ್ರಾಮದಲ್ಲಿ ಚುನಾವಣಾ ಪ್ರಚಾರಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಪ್ರಚಾರದಲ್ಲಿ ಜೆಡಿಎಸ್ ಮುಖಂಡರುಗಳಾದ ಡಿ.ಎಂ.ವಿಶ್ವನಾಥ್, ನಾರಾಯಣಗೌಡ,ಬಿ.ಎಸ್.ಗೌಡ, ಪುಟ್ಟರಾಜು, ಬಿ. ನಾಗ ರಾಜು, ಚಂದ್ರು ಪಾಲ್ಗೊಂಡಿದ್ದರು.
ಶಾಸಕ ಡಿ.ಕೆ.ಶಿವಕುಮಾರ್ ಕನಕಪುರ ಕ್ಷೇತ್ರದ ಅಭಿವೃದ್ಧಿ ಐದು ವರ್ಷಗಳಿಂದೀಚೆಗೆ ಮಾತ್ರ ಆಗಿದೆ. ಹಿಂದೆ ಏನೂ ಕೆಲಸಗಳೇ ನಡೆದಿಲ್ಲ ಎಂದು ಅಬ್ಬರದ ಪ್ರಚಾರ ನಡೆಸಿದ್ದಾರೆ. ಮಾತೆತ್ತಿದರೆ ಸಾಕ್ಷಿಗುಡ್ಡೆಗಳನ್ನು ತೋರುವ ಇವರು, ವೃದ್ಧಾಪ್ಯ, ವಿಧವಾ ವೇತನಗಳು ಕಡಿತಗೊಂಡಾಗ, ಪಡಿತರವನ್ನು ಸರ್ಕಾರ ರದ್ದುಗೊಳಿಸಿದಾಗ ಯಾವ ರೀತಿ ಜನಪರವಾಗಿ ಸ್ಪಂದಿಸಿದ್ದಾರೆ ಎಂದು ಪ್ರಶ್ನಿಸಿದ ಸಿಂಧ್ಯಾ, ಕುಗ್ರಾಮವಾಗಿದ್ದ ಕನಕಪುರವನ್ನು ಅಭಿವೃದ್ಧಿಯ ಮುಂಚೂಣಿಗೆ ತಂದಿದ್ದೇ ನನ್ನ ಅವಧಿಯಲ್ಲಿ ಎಂದರು. ಜೆಡಿಎಸ್ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ಎಂ.ವಿಶ್ವನಾಥ್ ಮಾತನಾಡಿ, ಶಾಸಕ ಶಿವಕುಮಾರ್ ಅಭಿವೃದ್ಧಿಯನ್ನು ಮರೆತು ಜನರಿಗೆ ಆಸೆ ಆಮಿಷ ಪ್ರಲೋಭನೆಗಳನ್ನು ಒಡ್ಡುವ ಮೂಲಕ ಗೆಲ್ಲುವ ಯತ್ನ ನಡೆಸಿದ್ದಾರೆ. ಪ್ರಜ್ಞಾವಂತ ಮತದಾರರು ಈ ಚುನಾವಣೆಯಲ್ಲಿ ಅವರಿಗೆ ತಕ್ಕಪಾಠ ಕಲಿಸಲಿದ್ದಾರೆ ಎಂದರು.