ಗುಂಜೂರು ಬಳಿ ರು. 35 ಲಕ್ಷ ವಶ
ಕ.ಪ್ರ.ವಾರ್ತೆ ದೊಡ್ಡಬಳ್ಳಾಪುರ ಏ. 18
ದೊಡ್ಡಬಳ್ಳಾಪುರ ತಾಲೂಕಿನ ಗುಂಜೂರು ಚೆಕ್ ಪೊಸ್ಟ್ ಬಳಿ ಮಾರುತಿ ಓಮ್ನಿ ವಾಹನದಲ್ಲಿ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ಒಟ್ಟು 35 ಲಕ್ಷ ರು.ಗಳನ್ನು ವಶಪಡಿಸಿಕೊಂಡಿರುವ ಘಟನೆ ಗುರುವಾರ ರಾತ್ರಿ 10 ಗಂಟೆ ವೇಳೆಯಲ್ಲಿ ನಡೆದಿದೆ.
ಆರೋಪಿಗಳಾದ ನಾಗರಾಜ್ ಮತ್ತು ಪ್ರಸನ್ನ ಎಂಬುವವರನ್ನು ಬಂಧಿಸಲಾಗಿದೆ. ಓಮ್ನಿ ಕಾರು ಮತ್ತು 2 ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಆರೋಪಿಗಳು ಹಣವನ್ನು ಬೆಂಗಳೂರಿನಿಂದ ಗೌರಿಬಿದನೂರಿಗೆ ಅಕ್ರಮವಾಗಿ ಸಾಗಿಸುತ್ತಿದ್ದರು ಎನ್ನಲಾಗಿದೆ. ದೊಡ್ಡಬಳ್ಳಾಪುರ-ಹಿಂದೂಪುರ ರಾಜ್ಯ ಹೆದ್ದಾರಿಯಲ್ಲಿರುವ ಗುಂಜೂರು ಸಮೀಪ ವಾಹನ ಬರುತ್ತಿದ್ದ ವೇಳೆ ಖಚಿತಮಾಹಿತಿ ಮೇರೆಗೆ ತಹಸೀಲ್ದಾರ್ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ಚುನಾವಣೆ ಬಳಕೆಗಾಗಿ ಈ ಹಣ ಕೊಂಡೊಯ್ಯುತ್ತಿದ್ದರು ಎಂದು ಅನುಮಾನಿಸಲಾಗಿದೆ. ಹಣಕ್ಕೆ ಯಾವುದೇ ದಾಖಲೆಗಳು ಸಿಕ್ಕಿಲ್ಲ. ಘಟನೆ ಸಂಬಂಧ ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.