ಜೆಡಿಎಸ್ಗೆ 'ಕೈ' ಎದುರಾಳಿ
ಕ.ಪ್ರ.ವಾರ್ತೆ ಕನಕಪುರ ಏ.18
ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಜೆಡಿಎಸ್ಗೆ ಕಾಂಗ್ರೆಸ್ ಮಾತ್ರ ಎದುರಾಳಿಯಾಗಿದ್ದು, ಬಿಜೆಪಿಯೂ ಸೇರಿ ಇತರೇ ಪಕ್ಷಗಳು ಗೌಣವಾಗಿವೆ. ಜನಪರ, ರೈತಪರ ಸರ್ಕಾರವಾದ ಜಾತ್ಯತೀತ ಜನತಾದಳವನ್ನು ಮತದಾರರು ಆರಿಸಲಿದ್ದಾರೆ ಎಂದು ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ಹೇಳಿದ್ದಾರೆ.
ಅವರು ಕನಕಪುರ ತಾಲೂಕಿನ ಗಡಿಭಾಗದ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡುತ್ತಿದ್ದರು.
ಬಹುತೇಕ ಗ್ರಾಮಗಳು ಇಂದಿಗೂ ಅಭಿವೃದ್ಧಿಯನ್ನು ಕಂಡಿಲ್ಲ. ಎಲ್ಲಾ ಕಡೆಗಳಲ್ಲಿಯೂ ಮೂಲಭೂತ ಸೌಕರ್ಯಗಳ ಕೊರತೆ, ಕುಡಿಯುವ ನೀರಿಗೆ ಹಾಹಾಕಾರ ಕಂಡುಬರುತ್ತಿದೆ. ಜನತೆ ಮತ್ತೊಮ್ಮೆ ಕುಮಾರಸ್ವಾಮಿಯವರ ಆಡಳಿತ ಬಯಸುತ್ತಿದ್ದು ಜನರು ಆಶೀರ್ವಾದ ಮಾಡಲಿದ್ದಾರೆ ಎಂದು ಸಿಂಧ್ಯಾ ನುಡಿದರು.
ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ಎಂ.ವಿಶ್ವನಾಥ್ ಮಾತನಾಡುತ್ತಾ, ರಾಜ್ಯದಲ್ಲಿ ರೈತಪರ ಸರ್ಕಾರ ತರಲು ದೇವೇಗೌಡ, ಕುಮಾರಸ್ವಾಮಿ ಹಾಗೂ ಸಿಂಧ್ಯಾರಿಂದ ಮಾತ್ರ ಸಾಧ್ಯವಾಗಿದ್ದು, ತಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಜನರಿಗೆ ದೊರಕಿಸಿಕೊಟ್ಟ ಬಹುತೇಕ ಸೌಲಭ್ಯಗಳನ್ನು ಇಂದಿನ ಸರ್ಕಾರ ಮೂಲೆಗುಂಪು ಮಾಡಿದೆ. ಕಾಂಗ್ರೆಸ್ ಎಂದಿಗೂ ವಿರೋಧಪಕ್ಷವಾಗಿ ಕಾರ್ಯ ನಿರ್ವಹಿಸಿಲ್ಲ ಎಂದು ಟೀಕಿಸಿದರು. ಡಿ.ಎಂ. ವಿಶ್ವನಾಥ್, ಬಾಲನರಸಿಂಹ, ಮಾರೇಗೌಡ, ಕೃಷ್ಣಪ್ಪ, ಶಿವರಾಜು, ರಮೇಶ್, ಗಣೇಶ್ ಪಾಲ್ಗೊಂಡಿದ್ದರು.