ಬಲ ಪ್ರದರ್ಶಿಸಲು, ಜನ ಸೇರಿಸಲು ಚೆಲ್ಲಿದರು ಹಣ
ರಾಮನಗರ: ಜಿದ್ದಾಜಿದ್ದಿನ ರಾಜಕೀಯ ಸೆಣೆಸಾಟಕ್ಕೆ ಹೆಸರಾದ ರೇಷ್ಮೆನಾಡು ರಾಮನಗರದಲ್ಲಿ ಪ್ರಮುಖ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಹಂತದಲ್ಲಿ ಜನ ಜಾತ್ರೆ ಸೇರಿಸುವ ಮೂಲಕ ಬಲ ಪ್ರದರ್ಶಿಸಲು ಸಾಕಷ್ಟು ಹಣ ಚೆಲ್ಲಿದ್ದಾರೆ. ಅಭ್ಯರ್ಥಿಗಳ ಭರಾಟೆ ಗಮನಿಸಿದರೆ ಮತದಾನದ ವೇಳೆಗೆ ಹಣದ ಹೊಳೆ ಹರಿಯುವ ಲಕ್ಷಣ ಗೋಚರಿಸುತ್ತಿದೆ.
ಹಿಂದೆಲ್ಲಾ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆಗೆ ಆಪ್ತರು, ಬೆಂಬಲಿಗರು ಮತ್ತು ಪಕ್ಷಗಳ ಕಾರ್ಯಕರ್ತರು ಪಾಲ್ಗೊಳ್ಳುತ್ತಿದ್ದರು. ಆದರೆ, ಇತ್ತೀಚಿನ ಚುನಾವಣೆಗಳಲ್ಲಿ ಬಹುತೇಕ ಅಭ್ಯರ್ಥಿಗಳು ದುಡ್ಡು ಕೊಟ್ಟು ಜನರನ್ನು ಸೇರಿಸುವ ಕಸರತ್ತಿಗೆ ಇಳಿದಿದ್ದಾರೆ. ಜಿಲ್ಲೆಯಲ್ಲಿ ನಾಮಪತ್ರದ ಹಂತದಲ್ಲೇ ಕೋಟಿಗಟ್ಟಲೆ ಹಣದ ವಹಿವಾಟು ನಡೆದಿದೆ.
ತಂತ್ರಗಾರಿಕೆಯಲ್ಲಿ ಒಂದು ಭಾಗ: ನಾಮಪತ್ರ ಸಲ್ಲಿಕೆ ವೇಳೆ ಮೆರವಣಿಗೆ ಮತ್ತು ಬಹಿರಂಗ ಪ್ರಚಾರದ ಅಂತ್ಯದಂದು ಸಮಾವೇಶದ ಮೂಲಕ ಶಕ್ತಿ ಪ್ರದರ್ಶನ ನಡೆಸುವುದು ಚುನಾವಣಾ ಪ್ರಚಾರದ ತಂತ್ರಗಾರಿಕೆಯಲ್ಲಿ ಒಂದು ಭಾಗವಾಗಿದೆ. ಈ ಪ್ರಯೋಗವು ಜನತೆಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಿ, ಎದುರಾಳಿಗಳಿಗೆ ನಡುಕ ಹುಟ್ಟಿಸುವ ತಂತ್ರವಲ್ಲದೆ ಮತ್ತೇನೂ ಅಲ್ಲ.
ಕಾರ್ಯಕರ್ತರ ಕಸರತ್ತು: ಕನಕಪುರದ ಜೆಡಿಎಸ್ ಅಭ್ಯರ್ಥಿ ಪಿ.ಜಿ.ಆರ್.ಸಿಂಧ್ಯಾ ಹೊರತುಪಡಿಸಿ ಉಳಿದೆಲ್ಲ ಪ್ರಮುಖ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಅದ್ಧೂರಿ ಮೆರವಣಿಗೆ ಆಯೋಜಿಸಿದ್ದರು. ಬೆಂಬಲಿಗರು, ಮುಖಂಡರು ಮತ್ತು ಬೂತ್ ಮಟ್ಟದ ಕಾರ್ಯಕರ್ತರ ಮೂಲಕವೇ ಈ ಏರ್ಪಾಟು ನಡೆದಿತ್ತು.
ಹೆಚ್ಚು ಜನರನ್ನು ಸೇರಿಸುವ ನಿಟ್ಟಿನಲ್ಲಿ ಎಚ್.ಡಿ.ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್, ಅನಿತಾ ಕುಮಾರಸ್ವಾಮಿ, ಸಿ.ಪಿ.ಯೋಗೇಶ್ವರ್, ಎಚ್.ಸಿ.ಬಾಲಕೃಷ್ಣ, ಮರಿದೇವರು, ಮಂಜುನಾಥ್ ಮಾತ್ರವಲ್ಲದೆ ಚನ್ನಪಟ್ಟಣದ ಬಿಜೆಪಿ ಅಭ್ಯರ್ಥಿ ರವಿಕುಮಾರ್ ತೀವ್ರ ಆಸಕ್ತಿ ವಹಿಸಿಯೇ ಕೆಲಸ ಮಾಡಿದ್ದಾರೆ. ಚನ್ನಪಟ್ಟಣದ ಪಕ್ಷೇತರ ಅಭ್ಯರ್ಥಿ ಸುವರ್ಣ ಎಂಬುವರು ಸುಮಾರು 2 ಸಾವಿರ ಮಹಿಳೆಯರನ್ನೇ ಕರೆತಂದಿದ್ದರು.
ಬಹಿರಂಗವಾಗಿ ಹಂಚಿಕೆ: ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವುದಕ್ಕೆ ಎರಡು ದಿನ ಮುಂಚೆಯೇ ಕಾರ್ಯಕರ್ತರಿಗೆ ಹಣ ತಲುಪಿಸಿದ್ದರು.
ಪ್ರತಿ ಬೂತ್ ಮಟ್ಟಕ್ಕೆ ಕನಿಷ್ಠ ರು.10 ಸಾವಿರದಿಂದ ರು.50 ಸಾವಿರದವರೆಗೂ ಹಣ ತಲುಪಿದೆ ಎನ್ನುವ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.
ಚುನಾವಣೆಯಲ್ಲಿ ನಾಮಪತ್ರ ಸಲ್ಲಿಕೆ ವೇಳೆಯ ಮೆರವಣಿಗೆ ಪ್ರಾಥಮಿಕ ಹಂತದ ಪ್ರಕ್ರಿಯೆ. ಹೀಗಾಗಿ ಹೆಚ್ಚು ಜನರನ್ನು ತನ್ನ ಕಡೆಯಿಂದ ಕರೆದೊಯ್ದು, ನೆಚ್ಚಿನ ನಾಯಕರನ್ನು ಮೆಚ್ಚಿಸಲು ಕಾರ್ಯಕರ್ತರು ಸಾಕಷ್ಟು ಹೋರಾಟ ನಡೆಸಿದ್ದಾರೆ. ಕರೆತಂದವರಿಗೆ ಕ್ಷೇತ್ರದ ಕೇಂದ್ರ ಸ್ಥಾನದಲ್ಲಿ ರಾಜಾರೋಷವಾಗಿಯೇ ಹಣ ಹಂಚಿದ್ದು ಗುಟ್ಟಿನ ಸಂಗತಿಯೇನಲ್ಲ. ಪಕ್ಷ ಮತ್ತು ಅಭ್ಯರ್ಥಿಗಳ ಕಡೆಯಿಂದ ಬಂದಿದ್ದ ಮೊತ್ತಕ್ಕೆ ಅನುಗುಣವಾಗಿ ಕಾರ್ಯಕರ್ತರು ಮೆರವಣಿಗೆಗೆ ಕರೆತಂದಿದ್ದವರಿಗೆ ಹಣ ಹಂಚಿದ್ದಾರೆ. ಮೆರೆಯಣಿಗೆಯಲ್ಲಿ ಪಾಲ್ಗೊಂಡವರಿಗೆ ಕನಿಷ್ಠ ರು.100 ರಿಂದ ರು.300ರವರೆಗೂ ಬಟವಾಡೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಗಮನ ಸೆಳೆದ ಮೆರವಣಿಗೆ: ರಾಮನಗರ ಜಿಲ್ಲೆಯ ಎಲ್ಲ ನಾಲ್ಕು ಕ್ಷೇತ್ರಗಳು ಪ್ರತಿಷ್ಠೆಯ ಕಣಗಳಾಗಿವೆ. ಈ ಬಾರಿ ಕನಕಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್, ಚನ್ನಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಮತ್ತು ಸಮಾಜವಾದಿ ಪಕ್ಷದ ಹುರಿಯಾಳು ಸಿ.ಪಿ.ಯೋಗೇಶ್ವರ್ ಮೆರವಣಿಗೆಗೆ ಭಾರಿ ಜನಸ್ತೋಮ ನೆರೆದಿತ್ತು.
ಕೆಎಸ್ಆರ್ಟಿಸಿಯು ಇದೀಗ ಎಷ್ಟೋ ಹಳ್ಳಿಗಳ ಮಾರ್ಗ ಸ್ಥಗಿತಗೊಳಿಸಿದೆ. ಹೆದ್ದಾರಿಯಂತಹ ಕಡೆಯೇ ಷಟಲ್ ಬಸ್ ವ್ಯವಸ್ಥೆ ಇಲ್ಲ. ಹೆಜ್ಜೆ ಹೆಜ್ಜೆಗೂ ನಿಂತ ಆಪೆ ಆಟೋಗಳಲ್ಲಿ ಕುರಿ ಮಂದೆಯಂತೆ ಜನರನ್ನು ತುಂಬಿಕೊಂಡು ಬರಲಾಗಿದೆ. ಅಧಿಕಾರಿಗಳ ತಂಡ ಕಣ್ಮುಚ್ಚಿ ಕುಳಿತಿದೆ.
-ಮತ್ತೀಕೆರೆ ಜಯರಾಮ್