ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

'ಕೈ'ಗೆ ಅಧಿಕಾರ ಸಿಗೋದು ಭ್ರಮೆ

Vishwanath S
Updated On : 20 Apr 2013, 12:30 pm

ಕ.ಪ್ರ.ವಾರ್ತೆ , ದೊಡ್ಡಬಳ್ಳಾಪುರ , ಏ.19
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರೋದು ದೊಡ್ಡ ಭ್ರಮೆ. ದೇಶವನ್ನು ಹಾಳು ಮಾಡುವುದರಲ್ಲಿ ಕಾಂಗ್ರೆಸ್ನವರು ಮೊದಲಿಗರು. ಬಡತನ ಮತ್ತು ಅಶಕ್ತ ವಾತಾವರಣವನ್ನೇ ಬಂಡವಾಳ ಮಾಡಿಕೊಂಡು ಆಳ್ವಿಕೆ ನಡೆಸಿದರು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿ ಸಿ.ಚನ್ನಿಗಪ್ಪ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶಾಶ್ವತ ನೀರಾವರಿ: ಪ್ರಸ್ತುತ ಸಂದರ್ಭದಲ್ಲಿ ಹೇಮಾವತಿ ಸೇರಿದಂತೆ ಕಾವೇರಿ ಕೊಳ್ಳದ ಯಾವುದೇ ಜಲಾಶಯದಿಂದ ನೀರು ತರುವುದು ಸುಲಭದ ಮಾತಲ್ಲ. ಹೀಗಾಗಿ ನಮಗೆ ಶಾಶ್ವತ ನೀರಾವರಿ ಯೋಜನೆ ಅನಿವಾರ್ಯ. ಪರಮಶಿವಯ್ಯ ವರದಿ ಆಧರಿಸಿ ಬಯಲುಸೀಮೆಗೆ ನೀರು ಕೊಡುವ ಯೋಗ್ಯತೆ ಕಾಂಗ್ರೆಸ್ ಮತ್ತು ಬಿಜೆಪಿಗೆ ಇಲ್ಲ. ಕಾವೇರಿ ನ್ಯಾಯಾಧಿಕಾರಣ ಪ್ರಾಧಿಕಾರ ರಚನೆಯಾದರೆ ಕನ್ನಡಿಗರ ನೀರು ಪರರ ಪಾಲಾಗಲಿದೆ. ಈ ಬಗ್ಗೆ ಯಾರೂ ಗಂಭೀರವಾಗಿ ಯೋಚಿಸುತ್ತಿಲ್ಲ. ಮುಂದಿನ 5 ವರ್ಷದಲ್ಲಿ ನೀರಾವರಿ ಯೋಜನೆಗಳಿಗೆ ರಾಜ್ಯದಲ್ಲಿ 65 ಸಾವಿರ ಕೋಟಿ ವೆಚ್ಚ ಮಾಡಬೇಕಿದೆ. ಅಧಿಕಾರಕ್ಕೆ ಬಂದರೆ ಸಮರೋಪಾದಿಯಲ್ಲಿ ಸವಾಲಾಗಿ ಸ್ವೀಕರಿಸಿ ಜನರಿಗೆ ನೀರು ಕೊಡಲು ಆದ್ಯತೆ ನೀಡಲಾಗುವುದು ಎಂದರು.
ಹಲವು ಯೋಜನೆಗಳು: ಅಧಿಕಾರಕ್ಕೆ ಬಂದ್ರೆ ಗರ್ಭಿಣಿಯರಿಗೆ ಮತ್ತು 70 ವರ್ಷ ಮೀರಿದ ವೃದ್ಧರಿಗೆ ತಿಂಗಳಿಗೆ 5 ಸಾವಿರ, ವಿಧವಾ-ವೃದ್ಧಾಪ್ಯ ವೇತನ 400ರಿಂದ 1500ಕ್ಕೆ ಏರಿಕೆ, ಹಾಲಿಗೆ  ರು.4 ಬೆಂಬಲ ಬೆಲೆ, ನೇಕಾರರು, ಕುಶಲಕರ್ಮಿಗಳು ಮತ್ತು ರೈತರ ಸಂಪೂರ್ಣ ಸಾಲ ಮನ್ನಾ ಸೇರಿದಂತೆ ಅನೇಕ ಯೋಜನೆಗಳನ್ನು ಪ್ರಕಟಿಸಿದರು.
ಬಿಜೆಪಿ ಹೊಣೆಗೇಡಿ: ಬಿಜೆಪಿ ಸರ್ಕಾರ ತನ್ನ ಹೊಣೆಗೇಡಿತನವನ್ನಷ್ಟೇ ಪ್ರದರ್ಶಿಸಲು 5 ವರ್ಷ ಅಧಿಕಾರ ಬಳಸಿಕೊಂಡಿದೆ. ಹಸಿರು ಶಾಲು ಹೊದ್ದು ರೈತರ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಜನ ರೈತರಿಗೆ ಮಾಡಿದ್ದೇನು ಎಂಬುದು ಎಲ್ಲರಿಗೂ ಗೊತ್ತಿದೆ. ರೈತರಿಗೆ ಪ್ರತ್ಯೇಕ ಬಜೆಟ್ ಎಂದು ಹೇಳಿ ಆತ್ಮಹತ್ಯೆ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾದದ್ದೇ ಅವರ ದೊಡ್ಡ ಸಾಧನೆ. ರು.1 ಗೆ ಕೆಜಿ ಅಕ್ಕಿ ಕೊಡುವ ಪ್ರಣಾಳಿಕೆ ನೀಡುವ ಅವರದು ಬರೀ ಡೋಂಗೀತನ. ನಾನು ಯಾವ್ತತೂ ಪೊಲೀಸ್ ರಕ್ಷಣೆಯಲ್ಲಿ ಸಿಎಂ ಆಗಿದ್ದವನಲ್ಲ. ಜನಸಾಮಾನ್ಯರ ವ್ಯಕ್ತಿಯಾಗಿದ್ದೆ ಎಂದರು. ಈ ಬಾರಿ ಚುನಾವಣೆಯಲ್ಲಿ ಜೆಡಿಎಸ್ ಗೆಲವು ನಿಶ್ಚಿತ. ಈ ನಿಟ್ಟಿನಲ್ಲಿ ದೊಡ್ಡಬಳ್ಳಾಪುರದಲ್ಲಿ ಚನ್ನಿಗಪ್ಪ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು. ಜೆಡಿಎಸ್ ಅಭ್ಯರ್ಥಿ, ಮಾಜಿ ಸಚಿವ ಸಿ.ಚನ್ನಿಗಪ್ಪ, ಜೆಡಿಎಸ್ ಮುಖಂಡರಾದ ಆರ್.ಗೋವಿಂದರಾಜು, ತ.ನ.ಪ್ರಭುದೇವ್, ಚುಂಚೇಗೌಡ, ಅಪ್ಪಯ್ಯಣ್ಣ, ಚಿಕ್ಕರಾಮಕೃಷ್ಣಪ್ಪ, ಲಕ್ಷ್ಮೀನಾರಾಯಣ್, ಪುಟ್ಟಬಸವರಾಜು ಸೇರಿದಂತೆ ಅನೇಕರು ಹಾಜರಿದ್ದರು.
ಮೊಯ್ಲಿಗೆ ನಾಚಿಕೆಯಾಗಬೇಕು
ಕೇಂದ್ರ ಸಚಿವ ಸಚಿವ ವೀರಪ್ಪಮೊಯ್ಲಿ ಕಾಂಗ್ರೆಸ್ ಗೆಲ್ಲಿಸೋವರೆಗೆ ದೆಹಲಿಗೆ ಹೋಗಲ್ಲ ಎಂದು ಹೇಳಿಕೆ ನೀಡಿದ್ದಾರೆ. ಅವರಿಗೆ ನಾಚಿಕೆಯಾಗಬೇಕು. ರೈತರಿಗೆ ನ್ಯಾಯ ಸಿಗೋವರೆಗೆ ದೆಹಲಿಗೆ ಹೋಗಲ್ಲ ಎಂದಿದ್ರೆ ಅವರನ್ನು ಅಭಿನಂದಿಸುತ್ತಿದ್ದೆ. ಕರಾವಳಿ ಜನ ತಿರಸ್ಕರಿದ ಮೇಲೆ ಚಿಕ್ಕಬಳ್ಳಾಪುರ-ದೊಡ್ಡಬಳ್ಳಾಪುರದ ಜನ ಅವರನ್ನು ಕೈ ಹಿಡಿದ್ರು. ಆದ್ರೆ ಈ ಭಾಗದ ರೇಷ್ಮೆ ಬೆಳೆಗಾರರನ್ನು ಬೀದಿಗೆ ತಂದು ನಿಲ್ಲಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಕೇಂದ್ರದ ಆರ್ಥಿಕ ನೀತಿ ವಿರುದ್ಧ ದನಿಯೆತ್ತದೆ ಅವರು ಸೋನಿಯಾ ನಿಷ್ಠೆ ಮೆರೆದಿದ್ದಾರೆ ಎಂದು ಟೀಕಿಸಿದರು.
ಜಿಲ್ಲಾ ಕೇಂದ್ರ ಭರವಸೆ
ಜೆಡಿಎಸ್ ಅಧಿಕಾರಕ್ಕೆ ಬಂದರೆ ದೊಡ್ಡಬಳ್ಳಾಪುರ ನಗರವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿ ಘೋಷಣೆ ಮಾಡಲಾಗುವುದು. ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಹಲವು ವರ್ಷಗಳ ಬೇಡಿಕೆಯಾಗಿರುವ ಈ ಒತ್ತಾಯವನ್ನು ಗಂಭೀರವಾಗಿ ಪರಿಗಣಿಸಿ ಜನರ ಆಶೋತ್ತರಗಳಿಗೆ ಸ್ಪಂದಿಸುವುದಾಗಿ ಅವರು ಭರವಸೆ ನೀಡಿದರು.
ಬೇಡುವ ಕೈ ಅಲ್ಲ...
ಈ ಕೈ ಎಂದೂ ಇತರರಿಗೆ ಕೊಡುವುದೇ ಹೊರತು, ಇತರರಿಂದ ಏನನ್ನೂ ಬೇಡುವುದಲ್ಲ. ನನ್ನಿಂದ ಎಲ್ಲ ಬಗೆಯ ಅವಕಾಶಗಳನ್ನೂ ಪಡೆದು ನನ್ನ ಹೆಸರನ್ನೂ ದುರ್ಬಳಕೆ ಮಾಡಿಕೊಂಡ ವ್ಯಕ್ತಿಗಳು ಹೊಣೆಯರಿತು ಮಾತನಾಡಬೇಕು ಎಂದು ಎಚ್.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದರು. 5 ಕೋಟಿಗೆ ಜೆಡಿಎಸ್ ಟಿಕೆಟ್ ಮಾರಾಟ ಆಗಿದೆ ಎಂದು ಹೇಳಿಕೆ ನೀಡಿರುವ ಬಿ.ಮುನೇಗೌಡ, ಬೇಡಿಕೆ ಇಟ್ಟಿದ್ದೇ ಎಂಬುದೂ ಸತ್ಯವಾದರೆ ಎಲ್ಲಿಗೆ ಬೇಕಾದರೂ ಬಂದು ಪ್ರಮಾಣ ಮಾಡಲಿ. ನಂಬಿಕೆ ದ್ರೋಹಿಗಳನ್ನು ಬಹಳ ನೋಡಿದ್ದೇನೆ. ಪಕ್ಷವನ್ನು ನಾನು ಬೆವರು ಹರಿಸಿ ಕಟ್ಟಿದ್ದೇನೆ. ವಿಮಾನ ನಿಲ್ದಾಣ ಅಭಿವೃದ್ಧಿ ಆದ ಮೇಲೆ ನನ್ನಿಂದ ಮುನೇಗೌಡ ಏನೇನು ಪ್ರಯೋಜನ ಪಡೆದರು ಎಂಬುದು ಅವರಿಗೇ ಗೊತ್ತು. ಅವಕಾಶವಾದಿತನದ ಹೇಳಿಕೆ ತರವಲ್ಲ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement