ಅವ್ಯವಹಾರದಲ್ಲಿ ಶಾಸಕರ ಕೈವಾಡ ಜನತೆ ಮುಂದಿಡುವೆ
ಕ.ಪ್ರ. ವಾರ್ತೆ , ಮಾಗಡಿ , ಏ.21
ಲೋಕೋಪಯೋಗಿ ಇಲಾಖೆಯಲ್ಲಿ ನಡೆದಿರುವ ಬಹುಕೋಟಿ ಹಗರಣ, ಸದನ ಸಮಿತಿಯಿಂದ ಸಾಬೀತು ಪಡಿಸಲಾಗಿದ್ದು, ಕ್ಷೇತ್ರದಲ್ಲಿ ನಡೆದಿರುವ ಅವ್ಯವಹಾರದಲ್ಲಿ ಶಾಸಕರ ಕೈವಾಡವಿದೆ ಎಂಬ ವಿಷಯವನ್ನು ಜನತೆಯ ಮುಂದಿಟ್ಟು ಮತಯಾಚಿಸುವುದಾಗಿ ಕಾಂಗ್ರೆಸ್ ಅಭ್ಯರ್ಥಿ ಎ.ಮಂಜು ತಿಳಿಸಿದರು. ಅವರು ಶಾನಭೋಗನಹಳ್ಳಿ ಗ್ರಾಮದಲ್ಲಿ ಮತದಾರರ ಮನೆಗಳಿಗೆ ತೆರಳಿ ಮತಯಾಚಿಸಿ, ನಂತರ ಮಾತನಾಡಿ, ಕ್ಷೇತ್ರದಲ್ಲಿ ಕಾಮಗಾರಿಗಳು ನಡೆಯದೆ ನೂರಾರು ಕೋಟಿ ರು.ಗಳನ್ನು ದುರುಪಯೋಗಪಡಿಸಿಕೊಂಡು, ಅಕ್ರಮ ಎಸಗಲಾಗಿದೆ. ಶಾಸಕರ ಶಿಫಾರಸು ಪತ್ರವಿಲ್ಲದೆ ಕಾಮಗಾರಿಗಳು ನಡೆಯಲ್ಲ ಎಂದರು. ಮಾಗಡಿ ಗುಡ್ಡಗಾಡು ಪ್ರದೇಶ. ಇಲ್ಲಿನ ಜನ ಮುಗ್ಧರು, ಕುಡಿಯುವ ನೀರಿಗೆ ಹಾಹಾಕಾರವಿದೆ. ಶಾಶ್ವತವಾದ ನೀರಾವರಿ ಯೋಜನೆಯಿಲ್ಲ, ರೈತರು ನೀರಿಲ್ಲದೆ ತುಂಬ ಸಂಕಷ್ಟದಲ್ಲಿದ್ದಾರೆ. ಇಲ್ಲಿನ ಬಡವರ ಬದುಕು ಮೂರಾಬಟ್ಟೆಯಾಗಿದೆ. ಮುಗ್ಧ ಜನತೆಗೆ ಮೋಸ ಮಾಡಿ ಕೋಟ್ಯಂತರ ರು. ಗುಳುಂ ಮಾಡಿದ್ದಾರೆ ಎಂದು ಎ.ಮಂಜು ಶಾಸಕರ ವಿರುದ್ಧ ಕಿಡಿಕಾರಿದರು.