ಎಚ್ಡಿಕೆಗೆ ಅಪಾರ ಜನಬೆಂಬಲ: ಹತಾಶ ಕಾಂಗ್ರೆಸ್ಸಿಗರು
ಕ.ಪ್ರ. ವಾರ್ತೆ , ರಾಮನಗರ , ಏ.21
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ದೊರೆಯುತ್ತಿರುವ ಅಪಾರ ಜನಬೆಂಬಲದಿಂದ ಹತಾಶರಾಗಿರುವ ಕಾಂಗ್ರೆಸ್ಸಿಗರು ಇಲ್ಲಸಲ್ಲದ ಆರೋಪಗಳಲ್ಲಿ ನಿರತರಾಗಿದ್ದಾರೆ. ಮೇ 5ರಂದು ನಡೆಯುವ ಚುನಾವಣೆಯಲ್ಲಿ ಜನತೆ ಇವರಿಗೆ ಬುದ್ಧಿ ಕಲಿಸಲಿದ್ದಾರೆ ಎಂದು ಯುವ ಜನತಾ ದಳದ ಅಧ್ಯಕ್ಷ ದೊರೆಸ್ವಾಮಿ ಹೇಳಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ತಾಲೂಕು ಕೇಂದ್ರವಾಗಿದ್ದ ರಾಮನಗರವನ್ನು ಜಿಲ್ಲೆಯನ್ನಾಗಿ ಮಾಡಿದರು. ಗುಂಡಿ ಬಿದ್ದಿದ್ದ ರಸ್ತೆಗಳನ್ನು ಅಭಿವೃದ್ಧಿಪಡಿಸಿ ಹೈಟೆಕ್ ರಸ್ತೆಗಳನ್ನಾಗಿಸಿದರು. ಯುಜಿಡಿ, ಒಳಚರಂಡಿ ವ್ಯವಸ್ಥೆ, ಕಾವೇರಿಯಿಂದ ಕುಡಿಯುವ ನೀರನ್ನು ತಂದು ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದರು. ಕ್ಷೇತ್ರದ ಜನತೆ ಕುಮಾರಸ್ವಾಮಿ ಅವರನ್ನು ಮನೆ ಮಗನಂತೆ ಭಾವಿಸಿದ್ದಾರೆ. ಎಲ್ಲಾ ವರ್ಗದ ಜನರು ಅವರನ್ನು ಮೆಚ್ಚಿಕೊಂಡಿದ್ದಾರೆ. ಚುನಾವಣೆಯಲ್ಲಿ ಕುಮಾರಸ್ವಾಮಿ ಅವರನ್ನು ಹಣಿಯಲು ಅವರ ವಿರುದ್ಧ ಬೇರೆ ಅಸ್ತ್ರವಿಲ್ಲದೆ ಹೊರಗಿನಿಂದ ಬಂದವರು ಎಂದು ಕೀಳುಮಟ್ಟದ ಆರೋಪಗಳಲ್ಲಿ ನಿರತರಾಗಿರುವುದು ಕಾಂಗ್ರೆಸ್ ಸಂಸ್ಕೃತಿ ಏನು ಎಂಬುದನ್ನು ತಿಳಿಸುತ್ತದೆ ಎಂದರು. ಕಳೆದ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರು 47 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಜಯಗಳಿಸಿದ್ದರು. ಈ ಬಾರಿ ಇನ್ನೂ ಹೆಚ್ಚು ಮತಗಳ ಅಂತರದಿಂದ ಜಯಗಳಿಸಲಿದ್ದಾರೆ ಎಂದು ದೊರೆಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ನಾಟಕ: ನಗರಸಭಾ ಸದಸ್ಯ ಆರ್.ಎ.ಮಂಜುನಾಥ್ ಮಾತನಾಡಿ, ಪಕ್ಷದಲ್ಲಿದ್ದವರಿಗೇ ಹಾರ ಹಾಕಿ ಅನ್ಯ ಪಕ್ಷಗಳ ಮುಖಂಡರು ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆ ಎನ್ನುವ ನಾಟಕವಾಡುತ್ತಿದ್ದಾರೆ. ಕೆಲವರಿಗೆ ಒತ್ತಾಯಪೂರ್ವಕವಾಗಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ ಎಂದು ದೂರಿದರು. ರಾಮನಗರದಲ್ಲಿ ಕಾಂಗ್ರೆಸ್ನ ಶಾಸಕರು ಅಧಿಕಾರದಲ್ಲಿದ್ದಾಗ ಯಾವ ಅಭಿವೃದ್ಧಿ ಕೆಲಸಗಳಾಗಿವೆ. ಎಚ್.ಡಿ.ದೇವೇಗೌಡ ಹಾಗೂ ಕುಮಾರಸ್ವಾಮಿ ಅವರು ಅಧಿಕಾರದಲ್ಲಿದ್ದಾಗ ಯಾವ ಅಭಿವೃದ್ಧಿ ಕಾಮಗಾರಿಗಳಾಗಿವೆ ಎಂಬುದು ಕ್ಷೇತ್ರದ ಪ್ರಜ್ಞಾವಂತ ಮತದಾರರಿಗೆ ಗೊತ್ತಿದೆ. ಈ ಚುನಾವಣೆಯಲ್ಲಿ ಜನರು ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು. ಇದೇ ವೇಳೆ ಕಾಡನಕುಪ್ಪೆ ಗ್ರಾಮದ ಮುಖಂಡರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೊಂಡರು. ಗೋಷ್ಠಿಯಲ್ಲಿ ಮುಖಂಡರಾದ ಶಿವಲಿಂಗೇಗೌಡ ಮತ್ತಿತರರಿದ್ದರು.