ಗುಂಡೇಟಿಂದ ಇಬ್ಬರು ಮರಗಳ್ಳರಿಗೆ ಗಾಯ
ಕನ್ನಡಪ್ರಭ ವಾರ್ತೆ, ಕೋಲಾರ, ಏ.21
ಬೆಂಗಳೂರಿನ ಬನ್ನೇರುಘಟ್ಟ ಅರಣ್ಯ ಪ್ರದೇಶದಲ್ಲಿ ಶ್ರೀಗಂಧದ ಮರ ಕಡಿಯಲು ಹೋಗಿ ಗುಂಡೇಟು ತಿಂದು ಗಾಯಗೊಂಡಿರುವ ಇಬ್ಬರು ಮರಗಳ್ಳ ಆರೋಪಿಗಳು ಚಿಕಿತ್ಸೆಗಾಗಿ ನಗರದ ಜಿಲ್ಲಾ ಆಸ್ಪತ್ರೆಗೆ ದಾಖಲು ಆಗಿದ್ದಾರೆ.
ಮಾಲೂರು ತಾಲೂಕಿನ ಮಾಸ್ತಿ ಹೋಬಳಿಯ ನಟವರಹಳ್ಳಿಯ ನಿವಾಸಿ ತಿಮ್ಮರಾಯಪ್ಪ (35) ಮತ್ತು ಬಾಲನಾಕನದೊಡ್ಡಿ ಗ್ರಾಮದ ರಾಮಕೃಷ್ಣಪ್ಪ (33) ಚಿಕಿತ್ಸೆಗಾಗಿ ದಾಖಲು ಆಗಿರುವ ಆರೋಪಿಗಳಾಗಿದ್ದಾರೆ.
ಬನ್ನೇರುಘಟ್ಟದ ಕಲ್ಕೆರೆ ಅರಣ್ಯ ಪ್ರದೇಶದಲ್ಲಿ ಶನಿವಾರ ಮಧ್ಯರಾತ್ರಿ 12.30ರ ಸಮಯದಲ್ಲಿ ಈ ಇಬ್ಬರು ಆರೋಪಿಗಳು ಶ್ರೀಗಂಧದ ಮರಗಳನ್ನು ಕಡಿಯುತ್ತಿದ್ದ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಕಾವಲುಗಾರರು ಹಾರಿಸಿದ ಗುಂಡೇಟು ಕಾಲಿಗೆ ತಾಕಿ ತೀವ್ರವಾಗಿ ಗಾಯಗೊಂಡು ಚಿಕಿತ್ಸೆಗಾಗಿ ಕೋಲಾರದ ಎಸ್ಸೆನ್ನಾರ್ ಆಸ್ಪತ್ರೆಗೆ ಬಂದಿದ್ದಾಗ ಖಚಿತ ಮಾಹಿತಿ ತಿಳಿದು ಅರಣ್ಯ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಆಸ್ಪತ್ರೆಗೆ ಧಾವಿಸಿ ಗಾಯಾಳುಗಳನ್ನು ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳು ತಪ್ಪು ಒಪ್ಪಿಕೊಂಡಿದ್ದಾರೆ.
ಸ್ಥಳಕ್ಕೆ ಡಿವೈಎಸ್ಪಿ ಶ್ರೀಹರಿ ಬರಹೂರು, ಸರ್ಕಲ್ ಜಗದೀಶ್, ಸಬ್ ಇನ್ಸ್‌ಪೆಕ್ಟರ್ ಶಿವಕುಮಾರ್ ಸಹ ಭೇಟಿ ನೀಡಿದ್ದರು. ಈ ಘಟನೆ ಅರಣ್ಯ ಇಲಾಖೆಗೆ ಸಂಬಂಧಪಟ್ಟಿದ್ದರಿಂದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ. ಪುಟ್ಟಣ್ಣ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ.
ಆರೋಪಿಗಳು ಮರ ಕಡಿಯುತ್ತಿದ್ದಾಗ ಅನುಮಾನಗೊಂಡ ಅರಣ್ಯ ಕಾವಲುಗಾರರು ಡಬಲ್ ಬ್ಯಾರಲ್ ಬಂದೂಕಿನಿಂದ ಮೂರು ಸುತ್ತು ಹಾರಿಸಿದ ಗುಂಡು ಹಾರಿಸಿರುವುದರಿಂದ ರಾಮಕೃಷ್ಣಪ್ಪ ಮತ್ತು ತಿಮ್ಮರಾಯಪ್ಪ ಗೊಂಡಿದ್ದರಲ್ಲದೆ ಅರಣ್ಯ ಪ್ರದೇಶದಿಂದ ತಪ್ಪಿಸಿಕೊಂಡು ನಂತರ ಕೋಲಾರಕ್ಕೆ ಬಂದು ಆಸ್ಪತ್ರೆಗೆ ದಾಖಲು ಆಗಿದ್ದರು.