ನೀತಿ ಸಂಹಿತೆ ಉಲ್ಲಂಘಿಸಿದರೂ ಕ್ರಮ ಇಲ್ಲ
ಕ.ಪ್ರ. ವಾರ್ತೆ , ರಾಮನಗರ , ಏ.21
ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿ, ಅಕ್ರಮಗಳು ನಡೆಯುತ್ತಿದ್ದರೂ ಸಂಬಂಧ ಪಟ್ಟ ಚುನಾವಣಾಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮಾಗಡಿ ವಿಧಾನಸಭಾ ಕ್ಷೇತ್ರದ ಸಂಯುಕ್ತ ಜನತಾದಳದ ಅಭ್ಯರ್ಥಿ ದೂರಿದ್ದಾರೆ.
ಬೆಂಬಲಿಗರೊಂದಿಗೆ ಆಗಮಿಸಿದ ಕೆ.ರಮೇಶ್ ಅವರು ಅಪರ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಅವರಿಗೆ ದೂರು ನೀಡಿದರು. ಪಕ್ಷೇತರ ಅಭ್ಯರ್ಥಿಗಳ ಹೆಸರಿನಲ್ಲಿ ಪರವಾನಗಿ ಪಡೆದ ಕಾರುಗಳನ್ನು ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಅಭ್ಯರ್ಥಿಗಳು ಪ್ರಚಾರ ಮಾಡಲು ಬಳಸುತ್ತಿದ್ದಾರೆ. ಪರವಾನಗಿ ಇಲ್ಲದ ವಾಹನಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಚುನಾವಣೆಗೆ ತಾವು ಮಾಡಿದ ಖರ್ಚನ್ನು ಪಕ್ಷೇತರ ಅಭ್ಯರ್ಥಿಗಳ ಲೆಕ್ಕಕ್ಕೆ ಸೇರಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಅಕ್ರಮಗಳನ್ನು ತಡೆಗಟ್ಟಲು ತೆರೆದಿರುವ ಚೆಕ್ ಪೋಸ್ಟ್‌ಗಳಲ್ಲಿ ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ಕಾರುಗಳನ್ನು ತಪಾಸಣೆ ನಡೆಸುವುದೇ ಇಲ್ಲ. ನಮ್ಮ ಕಾರುಗಳನ್ನು ತಡೆದು ಇಲ್ಲ ಸಲ್ಲದ ಪ್ರಶ್ನೆಗಳನ್ನು ಕೇಳಿ ಕಾಲ ಹರಣ ಮಾಡುತ್ತಿದ್ದಾರೆ. ತಪಾಸಣೆ ಹೆಸರಲ್ಲಿ ದ್ವಿಚಕ್ರ ವಾಹನಗಳ ಸವಾರರನ್ನು ತಡೆದು ಹಣ ವಸೂಲಿ ದಂಧೆಯಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ ಎಂದು ತಿಳಿಸಿದ್ದಾರೆ.
ದ್ವಿಚಕ್ರ ವಾಹನಗಳ ರ್ಯಾಲಿ ನಡೆಸುವ ಮೂಲಕ ಮತ ಯಾಚಿಸಲಾಗುತ್ತಿದೆ. ಮಾಗಡಿಯ ಹೋಬಳಿ ಮಟ್ಟದ ಚುನಾವಣಾಧಿಕಾರಿಗಳು ಚುನಾವಣಾ ಅಕ್ರಮಗಳನ್ನು ತಡೆಯಲು ವಿಫಲರಾಗಿದ್ದಾರೆ. ಆದ್ದರಿಂದ ತಾವುಗಳು ಕೂಡಲೇ ಗಮನ ಹರಿಸಿ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಹಾಗೂ ಅಕ್ರಮರಹಿತ ಚುನಾವಣೆ ನಡೆಯಲು ಅನುವು ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿಗೆ ನೀಡಿದ ಮನವಿಯಲ್ಲಿ ಉಲ್ಲೇಖಿಸಿದ್ದಾರೆ. ಈ ವೇಳೆ ಶಿವಯ್ಯ, ಕಾಳಿಯಪ್ಪ, ರಾಜಣ್ಣ, ಮಹಾಂತೇಶ ಮತ್ತಿತರರು ಹಾಜರಿದ್ದರು.