ಇಂದು ಮಾಗಡಿ ರಂಗನಾಥಸ್ವಾಮಿ ವೈಭವದ ಬ್ರಹ್ಮರಥೋತ್ಸವ
ಮಾಗಡಿ: ಇಲ್ಲಿನ ಶ್ರೀರಂಗನಾಥಸ್ವಾಮಿ ದೇವರ ವೈಭವದ ಬ್ರಹ್ಮರಥೋತ್ಸವ ಏ.23 ರಂದು ಮಂಗಳವಾರ ಬೆಳಿಗ್ಗೆ 11.30 ರಿಂದ 12 ಗಂಟೊಳಗೆ ಜರುಗಲಿದೆ.
ಪ್ರತಿ ವರ್ಷ ಚೈತ್ರ ಮಾಸದ ಉತ್ತರಾ ನಕ್ಷತ್ರದಲ್ಲಿ ರಂಗನ ಬ್ರಹ್ಮ ರಥೋತ್ಸವ ಜರುಗಲಿದೆ. ರಾಜ್ಯದ ವಿವಿಧ ಮೂಲೆಗಳಿಂದ ಲಕ್ಷಾಂತರ ಭಕ್ತರು ಶ್ರೀರಂಗನಾಥಸ್ವಾಮಿಯ ಬ್ರಹ್ಮ ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ರಥಕ್ಕೆ ಭಕ್ತಿಭಾವದಿಂದ ಪೂಜೆ ಸಲ್ಲಿಸಿ, ಬಾಳೆಹಣ್ಣು ಧನವ ಎಸೆಯುತ್ತಾರೆ, ನಂತರ ಗೋವಿಂದಾ...ಗೋವಿಂದಾ.. ಎಂಬ ನಾಮಸ್ಮರಣೆಯಂದಿಗೆ ರಥ ಎಳೆಯುತ್ತಾರೆ.
ರಥೋತ್ಸವದ ವೇಳೆ ವಿವಿಧ ಸಮಾಜದವರು ಸಾರ್ವಜನಿಕ ಅರವಟ್ಟಿಕೆಗಳನ್ನು ನಡೆಸುತ್ತಾರೆ. ದಕ್ಷಿಣ ಭಾರತದಲ್ಲಿಯೇ ಸುಪ್ರಸಿದ್ಧ ಬೃಹತ್ ದನಗಳ ಜಾತ್ರೆಯೂ ಸಹ ಪ್ರತಿ ವರ್ಷವೂ ಇಲ್ಲಿ ನಡೆಯುತ್ತದೆ.
ಬೆಂಗಳೂರಿನಿಂದ ಪಶ್ಚಿಮಕ್ಕೆ ಕೇವಲ 50 ಕಿ.ಮೀ ಸಮೀಪ ಮಾಗಡಿ ಮಾಂಡವ್ಯ ಕ್ಷೇತ್ರವಿದೆ. ಇಲ್ಲಿ ತಿರುಮಲೆ ಶ್ರೀರಂಗನಾಥಸ್ವಾಮಿ ಭವ್ಯ ದೇವಾಲಯವಿದೆ. ರಾಜ್ಯ ಮತ್ತು ಹೊರ ರಾಜ್ಯಗಳಿಂದಲೂ ಭಕ್ತರು ಬರುತ್ತಾರೆ. ಎಲ್ಲಡೆ ಬೆಂಗಳೂರು, ಮೈಸೂರು, ತುಮಕೂರು, ಕುಣಿಗಲ್ ಮಾರ್ಗವಾಗಿಯೂ ಬಸ್ ಹಾಗೂ ಇತರೆ ವಾಹನ ಮೂಲಕ ಮಾಗಡಿ ರಂಗನ ದರ್ಶನಕ್ಕೆ ಬರಬಹುದು.