'ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಕನ್ನಡ ಸಾಹಿತ್ಯ ಪಸರಿಸಲಿ'
ಕ.ಪ್ರ. ವಾರ್ತೆ , ಸೂಲಿಬೆಲೆ , ಏ.22
ಕನ್ನಡ ಸಾಹಿತ್ಯವನ್ನು ಹೆಚ್ಚು ಪಸರಿಸಲು ಪ್ರಾದೇಶಿಕ ಭಾಷೆಗಳಿಗೆ ಒತ್ತು ನೀಡಿ ಈ ಮೂಲಕ ಗ್ರಾಮೀಣ ಭಾಗದ ಯುವ ಕವಿಗಳು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಪ್ರತಿಭೆಯನ್ನು ಹೊರ ಹಾಕಬೇಕಿದೆ ಎಂದು ಖ್ಯಾತ ಅನುವಾದಿಕಿ ಹಾಗೂ ಕವಿಯತ್ರಿ ಪ್ರೊ.ಮಲರ್ವಿಳಿ ಅಭಿಪ್ರಾಯ ಪಟ್ಟಿದ್ದಾರೆ.
ಸೂಲಿಬೆಲೆ ಸರ್ಕಾರಿ ಪದವಿ ಕಾಲೇಜಿನಲ್ಲಿ ಕನ್ನಡ ಸಂಘವನ್ನು ಉದ್ಘಾಟಿಸಿ ಕನ್ನಡ ಸಾಹಿತ್ಯ ಮತ್ತು ಯುವ ಜನತೆ ವಿಷಯದ ಕುರಿತು ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ನಗರ ಪ್ರದೇಶದಲ್ಲಿ ಕನ್ನಡ ಭಾಷೆ ಇಂಗ್ಲಿಷ್ಮಯವಾಗುತ್ತಿದ್ದು, ಕನ್ನಡ ಸಾಹಿತ್ಯ ಮತ್ತು ಭಾಷೆ ಬೆಳವಣಿಗೆ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಕಾಣುತ್ತಿಲ್ಲ.
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕನ್ನಡದ ಸಾಹಿತ್ಯದ ಅಭಿರುಚಿಯನ್ನು ಹೊಂದಬೇಕು. ಸಮಾಜವನ್ನು ತಿದ್ದುವಂಥ ಸಾಹಿತ್ಯ ರಚನೆ ಗ್ರಾಮೀಣ ಭಾಗದ ಯುವ ಕವಿಗಳಿಂದ ಮೂಡಬೇಕಿದೆ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕಿ ಪ್ರೊ.ಸೀಮಾ ಮಾತನಾಡಿ, ಕನ್ನಡ ಸಾಹಿತ್ಯದೆಡೆಗೆ ನೈಪುಣ್ಯತೆಯನ್ನು ತೋರಿ ಕವನ ಸಂಕಲ ರಚನೆ ಮಾಡುವ ಸಾಮರ್ಥ್ಯ ವಿದ್ಯಾರ್ಥಿಗಳಲ್ಲಿದ್ದು, ಅನಿಸಿಕೆ ಮತ್ತು ಭಾವನೆಗಳು ಸಾಹಿತ್ಯದ ಮೂಲ ವಸ್ತುಗಳಾಗಬೇಕು. ಕನ್ನಡ ಎಲ್ಲಡೆ ಪಸರಿಸಲಿ ಎಂದರು.
ಯುವ ಕವಿ ಬೇಲೂರು ರಘನಂದನ್ ಹಾಗೂ ನಿವೃತ್ತ ಮುಖ್ಯ ಶಿಕ್ಷಕ ದೇವದಾಸ್ ಸುಬ್ರಾಯ್ ಸೇಠ್ ಮಾತನಾಡಿದರು. ಕನ್ನಡ ಸಾಹಿತ್ಯದ ಬಗ್ಗೆ ಪ್ರೊ.ಮಲರ್ವಿಳಿ ಮತ್ತು ವಿದ್ಯಾರ್ಥಿಗಳ ಮಧ್ಯೆ ಸಂವಾದ ನಡೆಯಿತು. ಮುಖ್ಯ ಅತಿಥಿಗಳಾಗಿದ್ದ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಪ್ರಶಾಂತ್, ಪ್ರೊ.ಮಂಜುಳಾ, ಶ್ರೀವರ್ಷ ಸೇರಿದಂತೆ ಕಾಲೇಜು ಅಧ್ಯಾಪಕರ ವರ್ಗ ಹಾಜರಿದ್ದರು.