ಚನ್ನಪಟ್ಟಣ ಕ್ಷೇತ್ರದಲ್ಲ್ಲಿನ ಜನತೆ ಹೊರಗಿನವರಿಗೆ ಮಣೆ ಹಾಕಲ್ಲ
ಕ.ಪ್ರ.ವಾರ್ತೆ , ಚನ್ನಪಟ್ಟಣ , ಏ.22
ತಾಲೂಕಿನ ಜನತೆ ಯಾವುದೇ ಕಾರಣಕ್ಕೂ ಹೊರಗಿನವರಿಗೆ ಮಣೆ ಹಾಕದೆ ನನ್ನನ್ನು ಗೆಲ್ಲಿಸುತ್ತಾರೆ ಎಂಬ ವಿಶ್ವಾಸ ವಿದೆ ಎಂದು ಮಾಜಿ ಸಚಿವ ಯೋಗೇಶ್ವರ್ ವಿಶ್ವಾಸ ವ್ಯಕ್ತ ಪಡಿಸಿದರು.
ತಾಲೂಕಿನ ಕೆಂಗಲ್ ದೇವಾಲಯಕ್ಕೆ ಪೂಜೆ ಸಲ್ಲಿಸುವ ಮೂಲಕ ಪ್ರಚಾರ ಕಾರ್ಯ ಆರಂಭಿಸಿ ಮಾತನಾಡಿ, ತಾಲೂಕಿನ ಜನತೆಗೆ ನಾನೇನೆಂದು ಗೊತ್ತು, ನನಗೆ ಜನರೇನೆಂದು ಗೊತ್ತು ಬೇರೆ ವಿಷಯಗಳ ಬಗ್ಗೆ ನಾನು ತಲೆಕೆಡಿಸಿ ಕೊಳ್ಳುವುದಿಲ್ಲ ಎಂದರು.
ಮತ್ತಷ್ಟು ಅಭಿವೃದ್ಧಿಗಾಗಿ ಸ್ಪರ್ಧೆ: 12 ವರ್ಷದಿಂದ ನಾನು ಈಕ್ಷೇತ್ರವನ್ನು ಪ್ರತಿನಿಧಿಸುತ್ತಾ ಬಂದಿದ್ದೇನಾದರೂ ಕ್ಷೇತ್ರದಲ್ಲಿ ಸಮಸ್ಯೆಗಳು ಹಾಗೇ ಉಳಿದಿವೆ. 11 ತಿಂಗಳು ನಾನು ಸಚಿವನಾಗಿದ್ದ ವೇಳೆ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದೆನಾದರೂ, ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗಿಲ್ಲ, ಅದಕ್ಕಾಗಿ ನಾನು ಸ್ಪರ್ಧಿಸುತ್ತಿದ್ದೇನೆ ಎಂದರು.
ಈಬಾರಿಯ ಚುನಾವಣೆಯಲ್ಲಿ ನಾನು ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಇಚ್ಛಿಸಿದ್ದೆನಾದರೂ ಕೆಲ ಮಂದಿಯ ಪಿತೂರಿಯಿಂದಾಗಿ ನನಗೆ ಟಿಕೆಟ್ ಕೈತಪ್ಪಿತು, ಪಕ್ಷೇತರವಾಗಿ ಸ್ಪರ್ಧಿಸಿದರೆ ಸಾಕಷ್ಟು ಗೊಂದಲ ಮಾಡಿ ಲಾಭ ಪಡೆಯಲು ವಿರೋಧ ಪಕ್ಷಗಳು ಕಾಯ್ದು ಕುಳಿತಿದ್ದವು. ಆದ್ದರಿಂದ ಸಮಾಜವಾದಿ ಪಕ್ಷದಿಂದ ಕಣಕ್ಕಿಳಿದಿದ್ದೇನೆ ಎಂದರು.
ಉತ್ತರ ಪ್ರದೇಶದಲ್ಲಿ ಅಧಿಕಾರದಲ್ಲಿರುವ ಈ ಪಕ್ಷ ರಾಷ್ಟ್ರ ಮಟ್ಟದ್ದಾಗಿದ್ದು , ಕೇಂದ್ರ ಸರ್ಕಾರದಲ್ಲಿ ತನ್ನದೇ ಆದ ಪ್ರಾಬಲ್ಯವನ್ನು ಸಾಧಿಸಿದೆ ಎಂದು ಹೇಳಿದರು.
ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ಕಣಕ್ಕಿಳಿದಿದ್ದು ಮತದಾರರು ನನ್ನನ್ನು ಬೆಂಬಲಿಸುತ್ತಾರೆಂಬ ವಿಶ್ವಾಸವಿದೆ ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ರಾಂಪುರ ಮಲುವೇಗೌಡ,ಕುಳ್ಳಪ್ಪ, ಸಿಂಗರಾಜಿಪುರ ರಾಜಣ್ಣ, ಎಸ್.ಸಿ.ಶೇಖರ್, ಹರೂರು ರಾಜಣ್ಣ ಮುಂತಾದವರು ಉಪಸ್ಥಿತರಿದ್ದರು.