'ಜೆಡಿಎಸ್ ಅಲೆಯಲ್ಲಿ ಕಾಂಗ್ರೆಸ್ ಕೊಚ್ಚಿ ಹೋಗೋದು ಖಚಿತ'
ಕ.ಪ್ರ.ವಾರ್ತೆ , ಕನಕಪುರ , ಏ.22
ರಾಜ್ಯದಲ್ಲಿ ಅತ್ಯಂತ ಉತ್ತಮ ಜನಪರ ಆಡಳಿತವನ್ನು 20 ತಿಂಗಳ ಕಾಲ ನೀಡಿದ ಜೆಡಿಎಸ್ ಸರ್ಕಾರವನ್ನು ಯುವಕರು ಉತ್ಸಾಹದಿಂದ ಬೆಂಬಲಿಸುತ್ತಿದ್ದಾರೆ. ಪ್ರವಾಹದೋಪಾದಿಯಲ್ಲಿ ಜೆಡಿಎಸ್ ಸೇರ್ಪಡೆಗೊಳ್ಳುತ್ತಿದ್ದಾರೆ. ಈ ಅಲೆಯಲ್ಲಿ ಕಾಂಗ್ರೆಸ್ ಕೊಚ್ಚಿಕೊಂಡು ಹೋಗುವುದು ಖಂಡಿತಾ ಎಂದು ಶಾಸಕ ಕೆ.ರಾಜು ಹೇಳಿದ್ದಾರೆ.
ಅವರು ಕನಪುರ ತಾಲೂಕು ಮರಳವಾಡಿ ಗ್ರಾಮದಲ್ಲಿ ರಾಮನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಹೆಚ್.ಡಿ. ಕುಮಾರಸ್ವಾಮಿ ಪರವಾಗಿ ಚುನಾವಣಾ ಪ್ರಚಾರ ನಡೆಸಿದರು. ಕಾರ್ಯಕ್ರಮದಲ್ಲಿ ಮುಖಂಡ ಕಬ್ಬಡ್ಡಿ ಬಾಬು ನೇತೃತ್ವ ದಲ್ಲಿ ನೂರಾರು ಮಂದಿ ಯುವಕರು ಜೆಡಿಎಸ್‌ಗೆ ಸೇರ್ಪಡೆ ಗೊಂಡರು. ಮುಖಂಡರುಗಳಾದ ನಾರಾಯಣಗೌಡ, ಸಿದ್ಧಮರಿಗೌಡ, ಭುಜಂಗಯ್ಯ,ರಾಮಕೃಷ್ಣ, ಕುಮಾರ್, ಸೋಮಸುಂದರ್, ಪುಟ್ಟಸ್ವಾಮಿ ಮೊದಲಾದವರು ಇಲ್ಲಿನ ಪ್ರಸಿದ್ಧ ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ತೆರೆದ ವಾಹನದಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡರು.
ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮರಿಲಿಂಗೇಗೌಡ ಮಾತನಾಡುತ್ತಾ, ಇಲ್ಲಿನ ಮತದಾರರು ನೀಡುವ ಮತ ಕೇವಲ ಶಾಸಕರ ಆಯ್ಕೆ ಮಾಡುವುದಷ್ಟೇ ಅಲ್ಲ. ಮುಖ್ಯಮಂತ್ರಿಯನ್ನು ಆರಿಸುವ ಖ್ಯಾತಿ ಸಿಗಲಿದೆ. ಅಭಿವೃದ್ಧಿಯಲ್ಲಿ ರಾಜ್ಯಕ್ಕೇ ಮಾದರಿ ಯಾಗುವ ರೀತಿಯಲ್ಲಿ ಕ್ಷೇತ್ರ ಬೆಳೆಯಲಿದೆ ಎಂದು ಹೇಳಿದರು.