ಪಾರದರ್ಶಕ ಚುನಾವಣೆಗೆ ಆದ್ಯತೆ
ಕ.ಪ್ರ.ವಾರ್ತೆ , ದೊಡ್ಡಬಳ್ಳಾಪುರ , ಏ.22
ಪಾರದರ್ಶಕ ಮತ್ತು ಶಾಂತಿಯುತ ಚುನಾವಣೆಗೆ ಆದ್ಯತೆ ನೀಡಬೇಕು. ಚುನಾವಣಾ ಆಯೋಗ ನೀಡಿರುವ ಎಲ್ಲ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮತ್ತು ಜಾರಿಗೊಳಿಸುವ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳೂ ಕರ್ತವ್ಯ ನಿರ್ವಹಿಸಬೇಕು ಎಂದು ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಡಾ.ಮಹೇಶ್ ಅಬಿಪ್ರಾಯಪಟ್ಟರು.
ಇಲ್ಲಿನ ಸೊಬಗು ಚಿತ್ರಮಂದಿರದಲ್ಲಿ ಸೋಮವಾರ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳ ಕಾರ್ಯಾಲಯ ನೇತೃತ್ವದಲ್ಲಿ ನಡೆದ ತಾಲೂಕಿನ ಮತಗಟ್ಟೆ ಅಧ್ಯಕ್ಷಾಧಿಕಾರಿ ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮತಗಟ್ಟೆ ವಸ್ತುಗಳನ್ನು ಪಡೆಯುವ ಸಮಯದಿಂದ ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೆ ನಿಯೋಜಿತ ಅಧಿಕಾರಿಗಳು ಹೊಣೆಯಾಧಾರಿತ ಜವಾಬ್ದಾರಿ ನಿರ್ವಹಿಸಬೇಕಾಗುತ್ತದೆ. ಮತಗಟ್ಟೆಗಳಲ್ಲಿ ಶಾಂತಿಪಾಲನೆ ಮತ್ತು ಸ್ಥಳೀಯರೊಂದಿಗೆ ಸೌಹಾರ್ದಯುತ ವಾತಾವರಣ ನಿರ್ಮಿಸಿಕೊಳ್ಳುವ ಮುಖೇನ ಪಾರದರ್ಶಕ ಮತ್ತು ಯಶಸ್ವಿ ಚುನಾವಣೆ ನಡೆಸಬೇಕಿದೆ. ಚುನಾವಣಾಧಿಕಾರಿಗಳು ಮತಗಟ್ಟೆ ಅಧಿಕಾರಿಗಳಿಗೆ ನೀಡುವ ಮತದಾರರ ಪಟ್ಟಿಯೇ ಅಂತಿಮವಾಗಿದ್ದು, ಅದರನ್ವಯ ಮತದಾನ ಪ್ರಕ್ರಿಯೆಗಳು ನಡೆಯಬೇಕಾಗುತ್ತದೆ. ಮತಗಟ್ಟೆಗೆ ತೆರಳುವ ಮುನ್ನ ಮತಯಂತ್ರಗಳನ್ನು ಪರೀಕ್ಷಿಸಿಕೊಂಡು ಹೋಗಬೇಕು. ತಾಂತ್ರಿಕ ದೋಷಗಳನ್ನು ಕೂಡಲೇ ಸರಿಪಡಿಸಿಕೊಳ್ಳಲು ಯೋಜನೆ ರೂಪಿಸಿಕೊಳ್ಳಬೇಕು ಎಂದು ವಿವರಿಸಿದರು.
ಮತಯಂತ್ರ ತರಬೇತಿ: ಮತಗಟ್ಟೆ ಅಧಿಕಾರಿಗಳು ಮತಯಂತ್ರಗಳನ್ನು ಬಳಕೆ ಮಾಡುವ ಕುರಿತು ಪ್ರಾಯೋಗಿಕ ತರಬೇತಿಯನ್ನು ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನೀಡಲಾಯಿತು. ವಿದ್ಯುನ್ಮಾನ ಮತಯಂತ್ರಗಳ ಬಳಕೆ, ನಿರ್ವಹಣೆ ಕುರಿತು ತಜ್ಞ ಅಧಿಕಾರಿಗಳು ಮಾರ್ಗದರ್ಶನ ಮಾಡಿದರು.
232 ಮತಗಟ್ಟೆಣ ಈ ಬಾರಿ 228 ಮತಗಟ್ಟೆಗಳು ಮತ್ತು 4 ಹೆಚ್ಚುವರಿ ಮತಗಟ್ಟೆಗಳೂ ಸೇರಿದಂತೆ 232 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಪ್ರತಿ ಮತಗಟ್ಟೆಗೆ ಒಬ್ಬ ಮತಗಟ್ಟೆ ಅಧ್ಯಕ್ಷಾಧಿಕಾರಿ ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳಿರುತ್ತಾರೆ. ಹೀಗಾಗಿ ತಲಾ 42 ಹೆಚ್ಚುವರಿ ಅಧಿಕಾರಿಗಳೂ ಸೇರಿದಂತೆ 274 ಮತಗಟ್ಟೆ ಅಧ್ಯಕ್ಷಾಧಿಕಾರಿಗಳು ಮತ್ತು 274 ಮತಗಟ್ಟೆ ಸಹಾಯಕ ಅಧಿಕಾರಿಗಳನ್ನು ನೇಮಿಸಿಕೊಳ್ಳಲಾಗಿದೆ. ಎಲ್ಲ ಮತಗಟ್ಟೆಗಳ ನಿರ್ವಹಣೆಗೆ ಉಪವಿಭಾಗಾಧಿಕಾರಿ ಡಾ.ಮಹೇಶ್ ಚುನಾವಣಾಧಿಕಾರಿ ಕಾರ್ಯನಿರ್ವಹಿಸಲಿದ್ದಾರೆ. ತಹಶೀಲ್ದಾರ್ ಚಂದ್ರ ಸಹಾಯಕ ಚುನಾವಣಾಧಿಕಾರಿಯಾಗಿದ್ದಾರೆ.
ತರಬೇತಿ ಕಾರ್ಯಾಗಾರದಲ್ಲಿ 548 ಮತಗಟ್ಟೆ ಅಧ್ಯಕ್ಷಾಧಿಕಾರಿ ಮತ್ತು ಸಹಾಯಕ ಅಧಿಕಾರಿಗಳು, ಆರ್ಓ ಡಾ.ಮಹೇಶ್, ಎಆರ್ಓ, ತಹಶೀಲ್ದಾರ್ ಚಂದ್ರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು. ಚುನಾವಣಾ ಆಯೋಗದ ಸೂಚನೆಗಳನ್ನು ಪ್ರಾತಕ್ಷಿಕೆ ಮೂಲಕ ವಿವರಿಸಲಾಯಿತು.