ಬಿಜೆಪಿ-ಜೆಡಿಎಸ್ ಸಮಾನ ಭ್ರಷ್ಟರು
ಕ.ಪ್ರ.ವಾರ್ತೆ , ದೊಡ್ಡಬಳ್ಳಾಪುರ , ಏ.22
ಬಿಜೆಪಿ ಮತ್ತು ಜೆಡಿಎಸ್ ಸಮಾನ ಭ್ರಷ್ಟರು. ಈ ರಾಜ್ಯದ ಇಂದಿನ ದುಸ್ಥಿತಿಗೆ ಈ ಎರಡೂ ಪಕ್ಷಗಳು ನೇರ ಕಾರಣ ಎಂದು ಮಾಜಿ ಶಾಸಕ ಆರ್.ಜಿ.ವೆಂಕಟಾಚಲಯ್ಯ ಆರೋಪಿಸಿದರು.
ದೊಡ್ಡಬಳ್ಳಾಪುರ ನಗರದ ವಿವಿಧ ಬಡಾವಣೆಗಳಲ್ಲಿ ಸೋಮವಾರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಟಿ.ವೆಂಕಟರಮಣಯ್ಯ ಪರ ನಡೆದ ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಬಿಜೆಪಿ ಜನರ ವಿಶ್ವಾಸ ಕಳೆದುಕೊಂಡಿದೆ. ಜೆಡಿಎಸ್ ಈ ಹಿಂದೆಯೇ ಜನರ ವಿಶ್ವಾಸಕ್ಕೆ ದ್ರೋಹ ಬಗೆದಿದೆ. ಹೀಗಾಗಿ ಜನರ ಮುಂದಿರುವ ಏಕೈಕ ಆಯ್ಕೆ ಕಾಂಗ್ರೆಸ್. ಕಾಂಗ್ರೆಸ್ ಪಕ್ಷದಿಂದ ಮಾತ್ರ ರಾಜ್ಯದಲ್ಲಿ ಸಮರ್ಥ ಆಡಳಿತ ನೀಡಲು ಸಾಧ್ಯ. ತತ್ವ-ಸಿದ್ಧಾಂತಗಳ ಆಧಾರದಲ್ಲೇ ಬದುಕಿರುವ ಪಕ್ಷ ಕಾಂಗ್ರೆಸ್. ಪಕ್ಷಾಂತರಿಗಳು ಮತ್ತು ಪಕ್ಷಕ್ಕೆ ದ್ರೋಹ ಬಗೆದ ಎಂತಹ ಪ್ರಭಾವಿಗಳಾದರೂ ಅವರಿಗೆ ಮಣೆಹಾಕುವ ಸಂಸ್ಕೃತಿಯನ್ನು ಕಾಂಗ್ರೆಸ್ ಮಾಡಿಲ್ಲ. ಸೋಲು-ಗೆಲವಿಗಿಂತ ಪ್ರಜ್ಞಾವಂತಿಕೆ ಮತ್ತು ಸಿದ್ಧಾಂತ ಮುಖ್ಯ ಎಂದು ಇದರಿಂದ ಸಾಬೀತು ಮಾಡಿದೆ ಎಂದರು.
ಕೆಪಿಸಿಸಿ ಸದಸ್ಯ ಎಂ.ಜಿ.ಶ್ರೀನಿವಾಸ್ ಮತ್ತು ಜಿ.ಪಂ ಮಾಜಿ ಅಧ್ಯಕ್ಷ ಸಿ.ಡಿ.ಸತ್ಯನಾರಾಯಣಗೌಡ ಮಾತನಾಡಿ, ಕ್ಷೇತ್ರದಲ್ಲಿ ಈ ಬಾರಿ ಹಣಬಲದ ರಾಜಕಾರಣಕ್ಕೆ ಕೆಲವರು ಮುಂದಾಗಿದ್ದಾರೆ. ಜನ ಕಾಂಗ್ರೆಸ್ನ ಪರ ಇದ್ದು, ಯಾವುದೇ ಶಕ್ತಿಗಳೂ ಜನರಿಗೆ ಮೋಸ ಮಾಡಲು ಸಾಧ್ಯವಿಲ್ಲ. ನಿಷ್ಠ ಕಾರ್ಯಕರ್ತರಿಗೆ ಈ ಬಾರಿ ಟಿಕೆಟ್ ಸಿಕ್ಕಿದ್ದು ನಿಜವಾದ ಅಭಿವೃದ್ಧಿ ಪರ ರಾಜಕಾರಣಕ್ಕೆ ಕಾಂಗ್ರೆಸ್ ಅಭ್ಯರ್ಥಿಯ ಗೆಲವು ಅನಿವಾರ್ಯ. ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಸರ್ಕಾರ ರಚನೆ ಮಾಡುವುದು ನಿಶ್ಚಿತ. ಹೀಗಾಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾದ ಅಲೆ ಇದೆ. ಪಕ್ಷಾಂತರ ಮತ್ತು ಹಣಬಲದ ರಾಜಕಾರಣವನ್ನು ಜನ ಕಡೆಗಾಣಿಸಬೇಕು ಎಂದರು.
ಬೆಳಗ್ಗೆ ಮುತ್ತೂರು ಬಡಾವಣೆಯಲ್ಲಿ ಆರಂಭವಾದ ಚುನಾವಣಾ ಪ್ರಚಾರ ಸಭೆಗಳು ಡಿಕ್ರಾಸ್, ಚಿಕ್ಕಪೇಟೆ, ಕಚೇರಿ ಪಾಳ್ಯ, ಕುಚ್ಚಪ್ಪನಪೇಟೆ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ನಡೆದವು. ದೊಡ್ಡಬಳ್ಳಾಪುರ ನಗರದ ಆಯಕಟ್ಟಿನ ಪ್ರದೇಶಗಳಲ್ಲಿ ಬಹಿರಂಗ ಪ್ರಚಾರ ಸಭೆಗಳನ್ನು ನಡೆಸಿ ಮತಯಾಚಿಸಲಾಯಿತು.
ಕಾರ್ಯಕ್ರಮಗಳಲ್ಲಿ ಕಾಂಗ್ರೆಸ್ ತಾಲೂಕು ಕಾರ್ಯದರ್ಶಿ ಜಿ.ಲಕ್ಷ್ಮೀಪತಿ, ಯುವ ಮುಖಂಡ ಡಾ.ನಾರಾಯಣ್, ಕೇಂದ್ರ ಉಕ್ಕು ಸಚಿವಾಲಯ ಸದಸ್ಯ ಸಿ.ಜಿ.ನಾಗೇಶ್, ನಗರಾಧ್ಯಕ್ಷ ತಿ.ರಂಗರಾಜು, ಕಾರ್ಯದರ್ಸಿ ಡಿ.ವಿ.ಅಶ್ವತ್ಥಪ್ಪ, ಮಾಜಿ ಜಿ.ಪಂ ಸದಸ್ಯ ದಯಾನಂದಸ್ವಾಮಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು, ಸ್ಥಳೀಯ ಸಂಸ್ಥೆ ಸದಸ್ಯರುಗಳು ಹಾಜರಿದ್ದರು.