ಶಾಂತಿ, ಸುವ್ಯವಸ್ಥೆ ಕಾಪಾಡಲು ಸಹಕರಿಸಿ: ಜಿಲ್ಲಾಧಿಕಾರಿ ಸೂಚನೆ
ಕ.ಪ್ರ.ವಾರ್ತೆ , ರಾಮನಗರ , ಏ.22
ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರಗಳು ಸೂಕ್ಷ್ಮ ಕ್ಷೇತ್ರಗಳಾಗಿವೆ. ಈ ಹಿನ್ನೆಲೆಯಲ್ಲಿ ಮದ್ಯ ಮುಕ್ತವಾದ ಚುನಾವಣೆಯಿಂದಷ್ಟೇ ಶಾಂತಿ, ಸುವ್ಯವಸ್ಥೆ ಕಾಪಾಡಲು ಸಾಧ್ಯ. ಈ ನಿಟ್ಟಿನಲ್ಲಿ ಸಹಕರಿಸುವಂತೆ ಅಬಕಾರಿ ಅಧಿಕಾರಿಗಳು ಮತ್ತು ಮದ್ಯ ಸನ್ನದುದಾರರಿಗೆ ಜಿಲ್ಲಾಧಿಕಾರಿ ನವೀನ್ ರಾಜ್‌ಸಿಂಗ್ ಮದ್ಯ ಸನ್ನದುದಾರರಿಗೆ ಸೂಚಿಸಿದರು.
ಚುನಾವಣೆ ಸಂಬಂಧ ಜಿಲ್ಲಾಡಳಿತ ಕಚೇರಿಯಲ್ಲಿ ಮದ್ಯ ಸನ್ನದುದಾರರು, ಅಬಕಾರಿ ಇಲಾಖೆ ಸಿಬ್ಬಂದಿ ಸಭೆ ನಡೆಸಿದ ಅವರು, ಮದ್ಯ ಸನ್ನದುದಾರರ ವ್ಯವಹಾರದ ಮೇಲೆ ಅಧಿಕಾರಿಗಳ ತಂಡ ನಿಗಾವಹಿಸಲಿದೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ನಿಗದಿಪಡಿಸಿದ ಪ್ರಮಾಣಕ್ಕಿಂತ ಹೆಚ್ಚಿಗೆ ಮದ್ಯವನ್ನು ಬಿಕರಿ ಮಾಡಬಾರದು. ರಾಜಕೀಯ ಪಕ್ಷಗಳು ನೀಡುವ ಚೀಟಿಗೆ ಮದ್ಯ ವಿತರಣೆ ಮಾಡಬಾರದು. ಇದನ್ನು ಉಲ್ಲಂಘಿಸಿದವರ ಸನ್ನದನ್ನು ರದ್ದುಗೊಳಿಸುವುದಾಗಿ ಅವರು ಹೇಳಿದರು.
ಗೈರು ಹಾಜರಾದ ಸನ್ನದುದಾರರಿಗೆ ಕಾರಣಕೇಳಿ ನೋಟಿಸ್ ನೀಡುವಂತೆ ಅಬಕಾರಿ ನಿರೀಕ್ಷಕರಿಗೆ ಜಿಲ್ಲಾಧಿಕಾರಿ ಆದೇಶಿಸಿದರು. ಅಬಕಾರಿ ಉಪ ಆಯುಕ್ತ ಎಸ್.ಶ್ರೀನಿವಾಸಮೂರ್ತಿ, ಉಪ ಅಧೀಕ್ಷಕ ನರೇಂದ್ರಕುಮಾರ್, ಅಬಕಾರಿ ನಿರೀಕ್ಷಕರಾದ ನಾರಾಯಣ ನಾಯ್ಕ, ನಾಗರಾಜು, ಸುನೀಲ್, ಜಿಲ್ಲೆಯ ನಾಲ್ಕು ತಾಲೂಕುಗಳ ಮದ್ಯ ಸನ್ನದುದಾರರು ಹಾಜರಿದ್ದರು.