'ಕೆಜೆಪಿ ನಿರ್ಣಾಯಕ ಪಾತ್ರ'
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ ಕೆಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಚಿತ್ರಸಾಹಿತಿ ವಿ.ನಾಗೇಂದ್ರಪ್ರಸಾದ್ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ.
ಇಲ್ಲಿನ ಶಿವಪುರಬಾಗಿಲು ಶ್ರೀಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುವುದರೊಂದಿಗೆ ತಮ್ಮ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದ ಅವರು, ದೊಡ್ಡಬಳ್ಳಾಪುರ ಕ್ಷೇತ್ರದ ಸಮಗ್ರ ಬದಲಾವಣೆ ಮತ್ತು ಮೂಲಸೌಕರ್ಯಗಳಿಗೆ ಆದ್ಯತೆ ನೀಡುವ ಸಲುವಾಗಿ ಜನರ ಆಶೀರ್ವಾದ ಬಯಸಿದ್ದೇನೆ. ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಬದಲಾವಣೆ ಮಾಡುವ ಕನಸು ಹೊಂದಿದ್ದೇನೆ. ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕವಾಗಿ ದೊಡ್ಡಬಳ್ಳಾಪುರವನ್ನು ಕಟ್ಟುವ ಉದ್ದೇಶ ಹೊಂದಿದ್ದೇನೆ. ಈ ಬಾರಿ ಜನ ಕೆಜೆಪಿಗೆ ಆಶೀರ್ವದಿಸಿ ಹರಸಿದರೆ ಉತ್ತಮ ಆಡಳಿತ ನಿರೀಕ್ಷಿಸಬಹುದು ಎಂದರು. ಮುಖಂಡ ರಾದ ಉಮಾಶಂಕರ್ ಪುಟಾಣಿ, ಗುರುರಾಜ್, ನೇಕಾರ ಘಟಕದ ರಾಜ್ಯಾಧ್ಯಕ್ಷ ಎಸ್.ಗೋವಿಂದರಾಜುಲು, ಆದಿಲಕ್ಷ್ಮಮ್ಮ, ಚಿತ್ರನಿರ್ದೇಶಕ ಧನುಚಂದ್ರ ಮಾವಿನಕುಂಟೆ, ನಟ ಹೇಮಂತ್ ಪಾಲ್ಗೊಂಡಿದ್ದರು.