ನಿಮಗೆ ಏಕೆ ಮತ ಹಾಕಬೇಕು?
ಕ.ಪ್ರ.ವಾರ್ತೆ ಬೆಂಗಳೂರು ಏ.24
ಅಭ್ಯರ್ಥಿಗಳೇ ನಿಮಗೆ ಏಕೆ ಮತ ಹಾಕಬೇಕು? ನೀವು ಗೆದ್ದರೆ ಏನು ಮಾಡುತ್ತೀರಿ...? ಹೀಗೆ ಮತದಾರರು ಪ್ರಶ್ನಿಸುವುದಕ್ಕೆ ವೇದಿಕೆ ನಿರ್ಮಿಸುತ್ತಿದೆ ಗಾಂಧೀಭವನ. ನಗರದಲ್ಲಿ ಕಣದಲ್ಲಿರುವ ನೂರಾರು ಅಭ್ಯರ್ಥಿಗಳು ಪ್ರತಿಬಾರಿಯಂತೆ ಸುಳ್ಳು ಭರವಸೆ ನೀಡಿ ಗೆದ್ದು ಬರಬಾರದೆಂದು ಗಾಂಧೀಭವನ ಗುರುವಾರದಿಂದ 10ದಿನಗಳ ವರೆಗೆ 'ಮುಖಾಮುಖಿ' ಎಂಬ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಗಾಂಧೀಭವನದ ಮುಖ್ಯಸ್ಥ, ಸ್ವಾತಂತ್ರ ಹೋರಾಟಗಾರ ಡಾ.ಹೊ.ಶ್ರೀನಿವಾಸಯ್ಯ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಆಯ್ದ 10 ವಿಧಾನಸಭೆ ಕ್ಷೇತ್ರಗಳ ಮಾನ್ಯತೆ ಪಡೆದ ಪಕ್ಷಗಳ ಅಭ್ಯರ್ಥಿಗಳನ್ನು ಗಾಂಧಿ ಭವನಕ್ಕೆ ಬರಮಾಡಿಕೊಳ್ಳಲಾಗುತ್ತದೆ. ಹಿರಿಯ ಗಣ್ಯರು, ಬುದ್ಧಿಜೀವಿಗಳ ಸಮ್ಮುಖದಲ್ಲಿ ಮತದಾರರ ಅಭ್ಯರ್ಥಿಗಳನ್ನು ಪ್ರಶ್ನಿಸುವಂತೆ ಮಾಡುತ್ತೇವೆ ಎಂದು ಶ್ರೀನಿವಾಸಯ್ಯ ಹೇಳಿದರು.
ಅಭ್ಯರ್ಥಿಗಳು ಚುನಾವಣೆ ವೇಳೆ ತಾವೇನೂ ಮಾಡುತ್ತೇವೆಂದು ಹೇಳಬೇಕು. ಆದರೆ, ಈಗ ಅಭ್ಯರ್ಥಿಗಳು ಪರಸ್ಪರ ಕೆಟ್ಟ ಶಬ್ದಗಳಿಂದ ಬೈದಾಡುತ್ತಿದ್ದಾರೆ. ಇಂಥ ಕೆಟ್ಟ ಸ್ಪರ್ಧೆ ಕಡಿಮೆಯಾಗಬೇಕಾದರೆ, ರಾಜಕಾರಣಿಗಳು ಸ್ಥಳೀಯ ಮಟ್ಟದಿಂದ ಸ್ಪರ್ಧಿಸಿ ನಂತರ ವಿಧಾನಸಭೆ, ಲೋಕಸಭೆ ಕಣಕ್ಕಿಳಿಯಬೇಕು ಎಂದರು. ಗಾಂಧಿ ಸ್ಮಾರಕ ನಿಧಿ, ಗಾಂಧಿ ಶಾಂತಿ ಪ್ರತಿಷ್ಠಾನ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಜಾನಪದ ಕಲಾವಿದರ ಒಕ್ಕೂಟ, ಕರ್ನಾಟಕ ಟಿ.ವಿ.ಸಂಘ, ಸಾಹಿತಿಗಳು, ಕಲಾವಿದರ ವೇದಿಕೆ, ಕರ್ನಾಟಕ ಸುಗಮ ಸಂಗೀತ ಪರಿಷತ್ತು ಸೇರಿದಂತೆ ಅನೇಕ ಸಂಸ್ಥೆಗಳು ಸಂಯುಕ್ತವಾಗಿ ಕಾರ್ಯಕ್ರಮ ನಡೆಸುತ್ತಿವೆ ಎಂದರು.
ಡಾ.ಡಬ್ಲ್ಯೂ.ಪಿ. ಕೃಷ್ಣ, ಶ್ರೀನಿವಾಸ ಜಿ.ಕಪ್ಪಣ್ಣ, ಗಂಗಾಧರ ಮೊದಲಿಯಾರ್, ಸಂಜೀವ್ ತಗಡೂರು, ಟಿ.ತಿಮ್ಮೇಶ್, ಜೋಗಿಲ ಸಿದ್ದರಾಜು, ವೈ.ಕೆ.ಮುದ್ದುಕೃಷ್ಣ, ಕೆ.ಟಿ.ಸತೀಶ್‌ಗೌಡ ಹಾಜರಿದ್ದರು.