ಬಿಜೆಪಿ ಜಾಹೀರಾತಿಗೆ ಕೆಜೆಪಿ ಆಕ್ಷೇಪ
ಕ.ಪ್ರ.ವಾರ್ತೆ ಬೆಂಗಳೂರು ಏ.24
ಸರ್ಕಾರದ ಅಭಿವೃದ್ಧಿ ಕಾರ್ಯಗಳ ಕುರಿತು ಬಿಜೆಪಿ ನೀಡುತ್ತಿರುವ ಜಾಹೀರಾತಿನಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕುರಿತು ಪ್ರಸ್ತಾಪಿಸದೆ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಕೆಜೆಪಿ ಉಪಾಧ್ಯಕ್ಷರೂ ಆಗಿರುವ ಮಾಧ್ಯಮ ವಿಭಾಗದ ಅಧ್ಯಕ್ಷ ಕೆ.ಎಚ್. ಶ್ರೀನಿವಾಸ್ ಹೇಳಿದ್ದಾರೆ.
ಬಿಜೆಪಿ ಸರ್ಕಾರ ಕಳೆದ ಐದು ವರ್ಷಗಳಲ್ಲಿ ಮಾಡಿರುವ ಸಾಧನೆಗಳು ಎಂದು ಹೇಳಿಕೊಂಡು ಸಾಕಷ್ಟು ಜಾಹೀರಾತುಗಳನ್ನು ನೀಡುತ್ತಿದೆ. ಎಲ್ಲಾ ಅಭಿವೃದ್ಧಿ ಕೆಲಸಗಳೂ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಕಾಲದಲ್ಲಿಯೇ ಆಗಿವೆ ಎನ್ನುವ ರೀತಿಯಲ್ಲಿ ಆ ಜಾಹೀರಾತುಗಳಿವೆ. ಈ ಮೂಲಕ ಬಿಜೆಪಿ ಜನರಿಗೆ ಅಸ್ಪಷ್ಟ ಸಂದೇಶ ನೀಡುತ್ತಿದೆ ಎಂದು ಆರೋಪಿಸಿದರು.
ಪತ್ರಿಕಾಗೌಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಯಾವುದೇ ಒಂದು ಸರ್ಕಾರ ಅಧಿಕಾರದಲ್ಲಿದ್ದರೆ ಅದು ಒಂದು ಪಕ್ಷದ ಸರ್ಕಾರವಾಗಿರುವುದರ ಜತೆಗೆ ಅದರ ನೇತೃತ್ವ ವಹಿಸಿದ ವ್ಯಕ್ತಿಯೂ ಪ್ರಮುಖನಾಗುತ್ತಾನೆ.
ಅಂದರೆ, ಯಾವುದೇ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದರೂ ಅದನ್ನು ಇಂತಹ ವ್ಯಕ್ತಿಯ ನೇತೃತ್ವದ ಸರ್ಕಾರ ಎಂದು ಕರೆಯಲಾಗುತ್ತದೆ. ಅದೇ ರೀತಿ ಬಿಜೆಪಿ ಸರ್ಕಾರದಲ್ಲಿ ಯಡಿಯೂರಪ್ಪ ಅವರೂ ಮುಖ್ಯಮಂತ್ರಿಯಾಗಿದ್ದರು ಎಂಬುದನ್ನು ಆ ಪಕ್ಷ ಮರೆತಿದೆ ಎಂದು ಕಿಡಿ ಕಾರಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿರುವ ಬಹುತೇಕ ಅಭಿವೃದ್ಧಿ ಕೆಲಸಗಳು ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಡೆದಿರುವಂತಹದ್ದು. ಇದಕ್ಕೆ ಸಂಧ್ಯಾ ಸುರಕ್ಷಾ, ಭಾಗ್ಯಲಕ್ಷ್ಮಿ, ಸಾಲ ಮನ್ನಾ, ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ... ಹೀಗೆ ಅನೇಕ ಕಾರ್ಯಕ್ರಮಗಳು ಉದಾಹರಣೆ. ಅಂದರೆ,
ಆ ಕೆಲಸಗಳನ್ನು ಮಾಡಿದ್ದು ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಎಂಬುದು ಸ್ಪಷ್ಟ. ಆದರೆ, ಬಿಜೆಪಿ ನೀಡುತ್ತಿರುವ ಜಾಹೀರಾತಿನಲ್ಲಿ ಯಡಿಯೂರಪ್ಪ ಅವರ ಹೆಸರನ್ನು ಕೈಬಿಟ್ಟಿರುವುದು ಅಕ್ಷಮ್ಯ. ಈ ರೀತಿ ಜನರನ್ನು ದಾರಿ ತಪ್ಪಿಸುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಸಾಹಿತಿಗಳ ಅಭಿಪ್ರಾಯ ತಪ್ಪಲ್ಲ, ಆದರೆ...: ಒಂದು ಪಕ್ಷವನ್ನು ಬೆಂಬಲಿಸಿ ಸಾಹಿತಿಗಳು ಅಭಿಪ್ರಾಯ ನೀಡುತ್ತಾರೆ ಎಂದರೆ ತಪ್ಪೇನೂ ಇಲ್ಲ. ಕಾಲ ಕಾಲಕ್ಕೆ ಅಂತಹ ಸಾಹಿತಿಗಳು ತಮ್ಮ ನಿಲುವು ಬದಲಿಸುತ್ತಾರೆ. ಆದರೂ ಸಾಹಿತಿಗಳು ಎಂದು ಹೇಳಿಕೊಂಡು ಒಂದು ಪಕ್ಷವನ್ನು ಬೆಂಬಲಿಸುವುದು ಸರಿಯಲ್ಲ. ಅಷ್ಟಕ್ಕೂ ಕೆಲವು ಸಾಹಿತಿಗಳು ಒಂದು ಪಕ್ಷದ ಪರ ಹೇಳಿಕೆ ನೀಡಿದ್ದಾರೆ. ಇನ್ನೂ ಸಾಕಷ್ಟು ಸಾಹಿತಿಗಳು ಇದ್ದಾರೆ. ಹೀಗಾಗಿ ಒಂದು ಪಕ್ಷದ ಪರ ಕೆಲವು ಸಾಹಿತಿಗಳು ನೀಡಿರುವ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿಲ್ಲ ಎಂದರು.