ಮತದಾರರಿಗೆ ಹಂಚಲು ಸಾಗಿಸುತ್ತಿದ್ದ ಬ್ರಾಂಡೆಡ್ ರೆಡಿಮೇಡ್ ಷರ್ಟ್ ವಶ
ಕನಕಪುರ: ತಾಲೂಕಿನ ಹೊನ್ನಿಗನಹಳ್ಳಿ ಚೆಕ್ ಪೋಸ್ಟ್ ಬಳಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಚುನಾವಣೆ ನೀತಿಸಂಹಿತೆ ಉಲ್ಲಂಘಿಸಿ ಮತದಾರರಿಗೆ ಹಂಚಲು ಸಾಗಿಸುತ್ತಿದ್ದ ಬ್ರಾಂಡೆಡ್ ರೆಡಿಮೇಡ್ ಷರ್ಟ್‌ಗಳು ಹಾಗೂ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಿಂದ ಅಡ್ಡಹಾದಿಯಲ್ಲಿ ವೆಂಕಟರಾಯರದೊಡ್ಡಿ ಕಡೆಗೆ ಸಾಗಿಸುತ್ತಿದ್ದ ಒಂದು ಗೂಡ್ಸ್ ವಾಹನದ ಭರ್ತಿ ಇದ್ದ ನೋಟ್ ಪುಸ್ತಕಗಳನ್ನು ವಶಪಡಿಸಿಕೊಳ್ಳಲಾಗಿದೆ.
ಎರಡೂ ಪ್ರಕರಣಗಳನ್ನು ಅನುಮಾನಾಸ್ಪದ ರೀತಿಯಲ್ಲಿ ವರ್ತಿಸಿದ ಕಾರಣದಿಂದ ಸಾರ್ವಜನಿಕರೇ ಹಿಡಿದು ಚುನಾವಣಾಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಹೊನ್ನಿಗನಹಳ್ಳಿ ಚೆಕ್ ಪೋಸ್ಟ್ ತಪಾಸಣೆಗೆ ನಿಯೋಜಿಸಿದ್ದ ಅಧಿಕಾರಿಗಳು ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದ್ದನ್ನು ಗಮನಿಸಿದ ಸಾರ್ವಜನಿಕರು ಕನಕಪುರದಿಂದ ಚುನಾವಣಾ ಶಾಖೆಯ ಹಿರಿಯ ಅಧಿಕಾರಿಗಳು ಬಂದು ದೂರು ದಾಖಲಿಸುವವರೆಗೂ ಬಿಡದೆ ಪ್ರತಿಭಟಿಸಿ ಪ್ರಕರಣವನ್ನು ಬೆಳಕಿಗೆ ತಂದಿದ್ದಾರೆ. ಅಕ್ರಮದಲ್ಲಿ ಚೆಕ್ ಪೋಸ್ಟ್ ಅಧಿಕಾರಿಗಳೇ ಶಾಮೀಲಾಗುತ್ತಿದ್ದು ಚುನಾವಣಾ ಆಯೋಗ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.