ಆಯೋಗದ ವೆಬ್‌ಸೈಟ್ ದುರ್ಬಳಕೆ: ವ್ಯಕ್ತಿ ಬಂಧನ
ಕ.ಪ್ರ.ವಾರ್ತೆ , ರಾಮನಗರ , ಏ.26
ಚುನಾವಣಾ ಆಯೋಗದ ವೆಬ್‌ಸೈಟ್ ದುರ್ಬಳಕೆ ಮಾಡಿಕೊಂಡು ಮತದಾರರ ಪಟ್ಟಿಯಲ್ಲಿ ಅಕ್ರಮವಾಗಿ ಮತದಾರರ ಹೆಸರನ್ನು ಸೇರ್ಪಡೆಗೊಳಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಮಾಗಡಿ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣ ಬಯಲಾಗಿರುವುದು ಪಟ್ಟಿಗೆ ನಕಲಿ ಮತದಾರರ ಸೇರ್ಪಡೆ ಆರೋಪಕ್ಕೆ ಇಂಬು ನೀಡಿದಂತಾಗಿದೆ.
ಮಾಗಡಿ ತಾಲೂಕಿನ ಗಂಗೋನಹಳ್ಳಿಯ ನಾರಾಯಣಮೂರ್ತಿ ಬಂಧಿತ ಆರೋಪಿ. ತಹಸೀಲ್ದಾರ್ ಹರೀಶ್‌ನಾಯಕ್ ನೀಡಿರುವ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ನ್ಯಾಯಬೆಲೆ ಅಂಗಡಿ ಮಾಲೀಕ ನಾರಾಯಣಮೂರ್ತಿ ತಾಲೂಕು ಕಚೇರಿ ಸಿಬ್ಬಂದಿಯಿಂದ ಚುನಾವಣಾ ಆಯೋಗದ ವೆಬ್‌ಸೈಟ್ ಯೂಸರ್ ಸರ್‌ನೇಮ್, ಪಾಸ್ ಪಡೆದುಕೊಂಡು ಮಾಗಡಿ ಪಟ್ಟಣದ ಇಂಟರ್ ಸೆಂಟರ್‌ನಲ್ಲಿ ಈ ಕೃತ್ಯ ಎಸಗಿದ್ದಾನೆ ಎಂದು ತಹಸೀಲ್ದಾರ್ ಹರೀಶ್‌ನಾಯಕ್ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.