ಎ.ಮಂಜು ಹೇಳಿಕೆಗೆ ಜೆಡಿಎಸ್ ಅಭ್ಯರ್ಥಿ ಎಚ್.ಸಿ. ಬಾಲಕೃಷ್ಣ ತಿರುಗೇಟು
ಮಾಗಡಿ: ಬಿಡದಿ, ಕೂಟಗಲ್ ಹೊರತು ಪಡಿಸಿ ಮಾಗಡಿ ಕ್ಷೇತ್ರ ಅಭಿವೃದ್ಧಿ ಕಂಡಿದೆ ಎಂದ ಕಾಂಗ್ರೆಸ್ ಅಭ್ಯರ್ಥಿ ಎ.ಮಂಜು ಅವರು ಪ್ರಚಾರದ ವೇಳೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ ಶಾಸಕ ಎಚ್.ಸಿ. ಬಾಲಕೃಷ್ಣ ತಿರುಗೇಟು ನೀಡಿದರು. ಅವರು ತಾಲೂಕಿನ ಕುದೂರು ಹೋಬಳಿ ಕೆಂಚನಪುರದಲ್ಲಿ ಮತಯಾಚಿಸಿ, ಮತದಾರರನ್ನುದ್ದೇಶಿಸಿ ಮಾತನಾಡುತ್ತಾ ಮಾಗಡಿ ಅಭಿವೃದ್ಧಿ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ರಾಜ್ಯದಲ್ಲಿಯೇ ಮಾದರಿಯ ಮಾಗಡಿಯನ್ನಾಗಿಸಲು ಶಕ್ತಿ ಮೀರಿ ಶ್ರಮಿಸಿದ್ದೇನೆ. ಬರಗಾಲ ಬಿರುಬೇಸಿಗೆ, ಆದರೂ ಅಗತ್ಯವಿರುವೆಡೆ ಕೊಳವೆ ಬಾವಿಗಳನ್ನು ಕೊರೆಸಿ, ನೀರಿನ ಭವಣೆಯನ್ನು ಪ್ರಾಮಾಣಿಕವಾಗಿ ಬಗೆಹರಿಸಿದ್ದೇನೆ. ಬಹುತೇಕ ಕ್ಷೇತ್ರದ ರಸ್ತೆಗಳು ಡಾಂಬರೀಕರಣಗೊಂಡಿವೆ ಎಂದು ವಿವರ ನೀಡಿದರು.
ಹಸಿರು ಕಾರ್ಡ್ ವಿತರಣೆ: ಕಾಂಗ್ರೆಸೇತರ ಸರ್ಕಾರದಿಂದ ಮಾತ್ರ ಬಡವರಿಗೆ ಹಸಿರು ಕಾರ್ಡ್ ವಿತರಣೆ ಮಾಡಲಾಗಿದೆ. ರಾಮಕೃಷ್ಣ ಹೆಗಡೆ, ದೇವೇಗೌಡ, ಹಾಗು ಎಚ್ಡಿಕೆ ಸಿಎಂ ಆಗಿದ್ದಾಗ ಮಾತ್ರ ಬಡವರಿಗೆ ಹಸಿರು ಪಡಿತರ ಚೀಟಿ ವಿತರಣೆ ಮಾಡುವ ಮೂಲಕ ಕಡಿಮೆ ದರದಲ್ಲಿ ಪಡಿತರ ವಿತರಣೆ ಕ್ರಮ ಕೈಗೊಂಡಿದ್ದರು ಎಂದು ಬಾಲಕೃಷ್ಣ ವಿವರಿಸಿದರು. ಏಸಪ್ಪನಪಾಳ್ಯದ ಗಂಗಣ್ಣ, ಜಿ.ಪಂ. ಸದಸ್ಯೆ ಹಂಸಕುಮಾರಿ, ತಾ.ಪಂ. ಉಪಾಧ್ಯಕ್ಷೆ ಅನಿಸಾಖಾನಂ, ನಾಗೇಶ್, ಪಾಲಕ್ಷಯ್ಯ ನಾರಸಂದ್ರ ಗ್ರಾ.ಪಂ. ಮಾಜಿ ಅಧ್ಯಕ್ಷ ಎಂ.ಎಚ್. ಸುರೇಶ್, ಮರಿಗೌಡ ಮತ್ತಿತರರು ಇದ್ದರು.