'ಜೆಡಿಎಸ್, ಕಾಂಗ್ರೆಸ್ ಶಾಸಕರು ನೀಡದ ಸೇವೆ ಮಾಡುವೆ'
ರಾಮನಗರ: ಅಭಿವೃದ್ಧಿಯೇ ನನ್ನ ಮೂಲ ಮಂತ್ರವಾಗಿದ್ದು, ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರು ನೀಡದಂತಹ ಸೇವೆಯನ್ನು ನಾನು ಕ್ಷೇತ್ರಕ್ಕೆ ನೀಡುವೆ ಎಂದು ಮಾಗಡಿ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಎಚ್.ಎಂ. ಕೃಷ್ಣಮೂರ್ತಿ(ಜೇಡ್ರಳ್ಳಿ ಕೃಷ್ಣಪ್ಪ) ಭರವಸೆ ನೀಡಿದರು.
ಮಾಗಡಿ ಕ್ಷೇತ್ರಕ್ಕೆ ಸೇರಿರುವ ರಾಮನಗರ ತಾಲೂಕಿನ ಲಕ್ಷ್ಮೀಪುರ, ಗುಂಗರಹಳ್ಳಿ, ದೊಡ್ಡಸೂಲಿಕೆರೆ, ಗೊಲ್ಲರದೊಡ್ಡಿ ಸೇರಿದಂತೆ ಕೂಟಗಲ್ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಶುಕ್ರವಾರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಮುಖಂಡರ ಕುತಂತ್ರ: ಕಾಂಗ್ರೆಸ್ ಮುಖಂಡರ ಕುತಂತ್ರದಿಂದ ನನಗೆ ಅಲ್ಲಿ ಟಿಕೆಟ್ ತಪ್ಪಿತು. ನನ್ನ 15 ವರ್ಷಗಳ ಸೇವೆ ಗುರುತಿಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೆಜೆಪಿ ಟಿಕೆಟ್ ನೀಡಿ ಆಶೀರ್ವದಿಸಿದ್ದಾರೆ ಎಂದು ಕೃಷ್ಣಮೂರ್ತಿ ಹೇಳಿದರು.
ಮಾಗಡಿ ಕ್ಷೇತ್ರದಲ್ಲಿ ಹಲವಾರು ವರ್ಷದಿಂದ ಅಭಿವೃದ್ಧಿ ಕುಂಟಿತವಾಗಿದೆ. ಕ್ಷೇತ್ರಕ್ಕೆ ಶಾಶ್ವತ ನೀರಾವರಿ ಮತ್ತು ಸಮಗ್ರ ಅಭಿವೃದ್ಧಿಗಾಗಿ ಮತದಾರರು ನನಗೆ ಆಶೀರ್ವದಿಸಿ, ಅಧಿಕ ಮತಗಳಿಂದ ಗೆಲ್ಲಿಸಬೇಕು ಎಂದರು. ಕೆಜೆಪಿ ಮುಖಂಡ ಎಂ. ರುದ್ರೇಶ್ ಮಾತನಾಡಿದರು.
ಲಕ್ಷ್ಮೀಪುರ ಗ್ರಾಮದಲ್ಲಿ ಕೆಜೆಪಿಗೆ ಸೇರ್ಪಡೆಯಾದ ಜೆಡಿಎಸ್‌ನ ಎಲ್.ವಿ. ವೀರೇಶ್, ಗಿರಿಜನರ ಸಮುದಾಯದ ಅಧ್ಯಕ್ಷ ಮುತ್ತುರಾಜ್, ಸುನಿಲ್‌ಕುಮಾರ್, ನಾರಾಯಣ, ರೇವಣ್ಣ, ಬಿಜೆಪಿಯ ಎಲ್.ಎನ್. ವೀರಭದ್ರಯ್ಯ, ಹರೀಶ್ ಅವರನ್ನು ಕೆಜೆಪಿಗೆ ಬರ ಮಾಡಿಕೊಂಡರು.