ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ರಕ್ತದಾನಿಗಳಿಗೆ ರಾಜ್ ಅಭಿಮಾನಿಯಿಂದ ಕನ್ನಡದ ಅನನ್ಯ ಕೃತಿಗಳ ವಿತರಣೆ

Vishwanath S
Updated On : 26 Apr 2013, 11:43 am

ದೊಡ್ಡಬಳ್ಳಾಪುರ: ಇದೊಂದು ವಿಶಿಷ್ಟ ರೀತಿಯ ರಕ್ತದಾನ ಕಾರ್ಯಕ್ರಮ. ಸಾಮಾನ್ಯವಾಗಿ ರಕ್ತದಾನಿಗಳಿಗೆ ಹಣ್ಣುಹಂಪಲು ನೀಡುತ್ತಾರೆ. ಆದರೆ ಇಲ್ಲಿನ ಪುಸ್ತಕಾಭಿಮಾನಿ ವೈದ್ಯರೊಬ್ಬರು ಡಾ.ರಾಜ್‌ಕುಮಾರ್ ಅವರ ಜನ್ಮ ದಿನಾಚರಣೆ ಅಂಗವಾಗಿ ಸ್ವಯಂ ಪ್ರೇರಿತರಾಗಿ 4 ವರ್ಷಗಳಿಂದ ರಕ್ತದಾನ ಶಿಬಿರ ಏರ್ಪಡಿಸುತ್ತಿದ್ದಾರೆ.
ಅದೇ ರೀತಿ ಈ ವರ್ಷವೂ ಇಲ್ಲಿನ ಶ್ರೀಗಂಗಾ ನರ್ಸಿಂಗ್ ಹೋಂ ನೇತೃತ್ವದಲ್ಲಿ, ತಾಲೂಕು ಶಿವರಾಜ್‌ಕುಮಾರ್ ಕನ್ನಡ ಸೇನಾ ಸಮಿತಿ ಸಹಯೋಗದಲ್ಲಿ ಬುಧವಾರ ಸ್ವಯಂಪ್ರೇರಿತ ರಕ್ತದಾನ ಶಿಬಿರ ಗಾಂಧಿ ಸರ್ಕಲ್ ಬಳಿ ಇರುವ ಗಂಗಾ ನರ್ಸಿಂಗ್ ಹೋಂ ಆವರಣದಲ್ಲಿ ನಡೆಯಿತು.
ಈ ಬಾರಿ ರಕ್ತದಾನಿಗಳಿಗೆಲ್ಲಾ ಕನ್ನಡದ ಮಹತ್ವದ ಲೇಖಕರ ವಿಶಿಷ್ಠ ಸಾಹಿತ್ಯ ಕೃತಿಗಳನ್ನು ನೀಡುವುದರೊಂದಿಗೆ ಆಸ್ಪತ್ರೆಯ ವೈದ್ಯ ಡಾ.ರಮೇಶ್‌ಗೌಡ ಪುಸ್ತಕಾಭಿಮಾನ ಮೆರೆದರು.
ಕುವೆಂಪು, ಬೇಂದ್ರೆ, ಡಿವಿಜಿ, ತೇಜಸ್ವಿ ತರಾಸು, ಮಾಸ್ತಿ ಮತ್ತಿತರ ಲೇಖಕರ ಪುಸ್ತಕಗಳನ್ನು ಉಚಿತವಾಗಿ ವಿತರಿಸಿದರು. ಕಳೆದ ಬಾರಿ ರಕ್ತದಾನ ಮಾಡಿರುವವರೂ ಕೂಡ ಈ ಗೌರವ ಪಡೆದದ್ದು ವಿಶೇಷ. ಇದೇ ಸಂದರ್ಭದಲ್ಲಿ  ಕನಸವಾಡಿಯ ನೇತಾಜಿ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನಡೆಯಿತು.
4 ದಿನಗಳ ಕಾಲ ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಅಗತ್ಯವಿರುವ ಮಹಿಳೆಯರಿಂದ ಉಚಿತವಾಗಿ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್, ಇಸಿಜಿ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಒಟ್ಟು 145 ಮಂದಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement