ಕೃಷ್ಣ ಅಧಿಕಾರಾವಧಿಯಲ್ಲಿ ಕಪ್ಪು ಚುಕ್ಕೆ ಇಲ್ಲದಂತಹ ಆಡಳಿತ
ಕ.ಪ್ರ.ವಾರ್ತೆ , ರಾಮನಗರ , ಏ.27
ರಾಜ್ಯದಲ್ಲಿ ಎಸ್.ಎಂ.ಕೃಷ್ಣ ಅಧಿಕಾರಾವಧಿಯಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದಂತಹ ಆಡಳಿತ ನಡೆದಿದೆ. ಆ ಅವಧಿಯಲ್ಲಿ ಜಾರಿಗೆ ಬಂದ ಜನಪರ ಯೋಜನೆಗಳು ಇಂದಿಗೂ ಜನಮಾನಸದಲ್ಲಿವೆ ಎಂದು ಪ್ರದೇಶ ಕಾಂಗ್ರೆಸ್ ಕಾನೂನು ಮತ್ತು ಮಾನವ ಹಕ್ಕುಗಳ ಘಟಕದ ಅಧ್ಯಕ್ಷ ಧನಂಜಯ ಹೇಳಇದರು.
ರಾಜ್ಯದಲ್ಲಿ ಈ ಬಾರಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಲಭಿಸದೆ ಅತಂತ್ರ ಸ್ಥಿತಿ ನಿರ್ಮಾಣವಾದಲ್ಲಿ ಜೆಡಿಎಸ್ಗೆ ಮತ್ತೊಮ್ಮೆ ಬ್ಲಾಕ್ ಮೇಲ್ ರಾಜಕಾರಣ ನಡೆಸುವುದಕ್ಕೆ ಆಸ್ಪದ ನೀಡಿದಂತಾಗಲಿದೆ ಎಂದು ಧನಂಜಯ ಆರೋಪಿಸಿದರು.
ಜೆಡಿಎಸ್ ಸ್ವಂತ ಬಲದ ಮೇಲೆ ಸರ್ಕಾರ ರಚಿಸುವಷ್ಟು ಸ್ಥಾನಗಳು ಎಂದಿಗೂ ಸಿಗುವುದಿಲ್ಲ. ಅತಂತ್ರ ಪರಿಸ್ಥಿತಿಯ ಲಾಭ ಪಡೆಯುವ ಹವಣಿಕೆಯಿಂದಷ್ಟೇ ಆ ಪಕ್ಷದ ನೇತಾರ ಎಚ್.ಡಿ.ಕುಮಾರಸ್ವಾಮಿ ಹೋರಾಟ ನಡೆಸುತ್ತಿದ್ದಾರೆ ಎಂದು ಅವರು ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
2004ರಲ್ಲಿ 58 ಸ್ಥಾನಗಳನ್ನು ಪಡೆದಿದ್ದ ಜೆಡಿಎಸ್ 2008ರಲ್ಲಿ 28 ಸ್ಥಾನಗಳಿಗೆ ಇಳಿದಿತ್ತು. ಈ ಬಾರಿ 18ಕ್ಕಿಂತ ಕಡಿಮೆಯಾಗುವ ಸಂಭವವಿದೆ. ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರ ಹಿಡಿಯುವುದು ನಿಶ್ಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಮರು ಚುನಾವಣೆಗೆ ದಾರಿ: ಎಚ್.ಡಿ.ಕುಮಾರಸ್ವಾಮಿ ಅವರು 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿದ್ದಾರೆ. ಇದೀಗ ಅವರು ವಿಧಾನಸಭೆಗೆ ಆಯ್ಕೆಯಾದಲ್ಲಿ ಲೋಕಸಭೆಗೆ ಮತ್ತೊಂದು ಮರು ಚುನಾವಣೆ ಎದುರಾಗಲಿದೆ ಎಂದು ಧನಂಜಯ ಹೇಳಿದರು. ಜೆಡಿಎಸ್ ಪಾಪದ ಕೂಸು: ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರವು ಜೆಡಿಎಸ್ ಪಾಪದ ಕೂಸು. ಜಾತ್ಯತೀತ ತತ್ವಗಳನ್ನು ಹೇಳುವ ಜೆಡಿಎಸ್ ಮುಖಂಡರು ಅಧಿಕಾರದ ದುರಾಸೆಯಿಂದ ಕೋಮುವಾದಿ ಬಿಜೆಪಿ ಜತೆ ಸೇರಿ ಸರ್ಕಾರ ರಚಿಸಿದ್ದೇ ರಾಜ್ಯದಲ್ಲಿ ರಾಜಕೀಯ ಸ್ಥಿತ್ಯಂತರಕ್ಕೆ ಕಾರಣ ಎಂದು ಅವರು ಹೇಳಿದರು.
ಬಿಜೆಪಿ 5 ವರ್ಷದಲ್ಲಿ ಮೂವರು ಮುಖ್ಯಮಂತ್ರಿಗಳನ್ನು ಬದಲಿಸಿದೆ. ಮುಖ್ಯಮಂತ್ರಿ, ಸಚಿವರು ಮತ್ತು ಶಾಸಕರು ಜೈಲಿಗೆ ಹೋಗಿ ಬಂದಿದ್ದಾರೆ. ಇನ್ನೊಂದಿಷ್ಟು ಅವಕಾಶ ಸಿಕ್ಕಿದ್ದರೆ ಬಿಜೆಪಿಯವರು ರಾಜ್ಯವನ್ನೇ ಮಾರಾಟ ಮಾಡಿಬಿಡುತ್ತಿದ್ದರು ಎಂದು ಧನಂಜಯ ಲೇವಡಿ ಮಾಡಿದರು. ಜೆಡಿಎಸ್, ಬಿಜೆಪಿ, ಬಿಎಸ್ಸಾರ್, ಕೆಜೆಪಿಗೆ ಜನತೆ ತಕ್ಕಪಾಠ ಕಲಿಸಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ಮಂಡ್ಯ ಜಿಲ್ಲಾ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ಬಿ.ಟಿ.ನಾಗರಾಜು, ರಾಜ್ಯ ಸಂಚಾಲಕ ಎ.ಜಿ.ಶಿವಣ್ಣ, ರಾಮನಗರ ಕಾಂಗ್ರೆಸ್ ವಿವಿಧ ಘಟಕಗಳ ಪದಾಧಿಕಾರಿಗಳಾದ ಕುಮಾರ್, ವೆಂಕಟೇಶ್, ಮಲ್ಲೇಶ್, ಹನುಮಂತರಾಜು, ನಾಗೇಶ್ ಹಾಜರಿದ್ದರು.