'ಸ್ಥಿರ, ಜನಪರ ಆಡಳಿತಕ್ಕಾಗಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತನಿ'್ನ
ಕ.ಪ್ರ.ವಾರ್ತೆ ರಾಮನಗರ ಏ.27
ಭ್ರಷ್ಟಾಚಾರ ರಹಿತ, ಸ್ಥಿರ ಮತ್ತು ಜನಪರ ಆಡಳಿತಕ್ಕಾಗಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತನ್ನಿ ಎಂದು ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಕರೆ ನೀಡಿದರು.
ಬಿಡದಿ ಹೋಬಳಿಯ ಶಾನುಮಂಗಲ ಸೇರಿದಂತೆ ವಿವಿಧೆಡೆ ಮಾಗಡಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ.ಮಂಜುನಾಥ್ಪ್ರ ಮತಯಾಚಿಸಿ ಅವರು, ಕಾಂಗ್ರೆಸ್ಸೇತರ ಪಕ್ಷಗಳು ಅಧಿಕಾರಕ್ಕೆ ಬಂದಾಗ ಕಚ್ಚಾಟ ತಪ್ಪಿದ್ದಲ್ಲ. ಅದರಿಂದ ರಾಜ್ಯದ ಅಭಿವೃದ್ಧಿ ಹಿನ್ನಡೆಯಾಗಿದೆ. ಮತದಾರರು ಈ ಬಾರಿ ಕಾಂಗ್ರೆಸ್ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಆಗ ಅದೃಷ್ಟದ ಗೆಲವು: ಕಳೆದ ಬಾರಿ ಮಾಗಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಸಮರ್ಥ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿರಲಿಲ್ಲ. ಇದರ ಲಾಭ ಪಡೆದು, ಬಾಲಕೃಷ್ಣ ಮರು ಆಯ್ಕೆಯಾಗಿದ್ದರು. ಆದರೆ, ಈ ಬಾರಿ ಅವರ ಗೆಲವು ಅಸಾಧ್ಯ. ಮಾಗಡಿ ಕ್ಷೇತ್ರಕ್ಕೆ ಸೇರಿದ ರಾಮನಗರ ಭಾಗವನ್ನು ಬಾಲಕೃಷ್ಣ ಕಡೆಗಣಿಸಿದ್ದು, ಮತದಾರರು ತಕ್ಕ ಉತ್ತರ ನೀಡಬೇಕು ಎಂದರು.
ಮಂಜುನಾಥ್ ಅವರು ರಾಮನಗರ ತಾಲೂಕಿಗೆ ಸೇರಿದವರಾಗಿದ್ದಾರೆ. ಈ ತಾಲೂಕಿನಿಂದ ಮಾಗಡಿ ಕ್ಷೇತ್ರಕ್ಕೆ ಸೇರಿರುವ ಮತದಾರರು ಮಂಜುನಾಥ್ ಅವರನ್ನು ಪೂರ್ಣ ಪ್ರಮಾಣದಲ್ಲಿ ಬೆಂಬಲಿಸಿ, ಗೆಲವಿಗೆ ಕಾರಣರಾಗಬೇಕು ಎಂದು ಅವರು ಹೇಳಿದರು.
ಹಗರಣ ಉರುಳಾಗಲಿದೆ: ಮಾಗಡಿ ಕ್ಷೇತ್ರದಲ್ಲಿ 1300 ಕಾಮಗಾರಿಗಳಿಗೆ ರು.317 ಕೋಟಿ ಬಿಡುಗಡೆಯಾಗಿದೆ. ಇದರಲ್ಲಿ ಬಹುಪಾಲು ಹಣ ಲೂಟಿಯಾಗಿದೆ. ಎಲ್ಲ ಕಾಮಗಾರಿಗಳಿಗೆ ಶಿಫಾರಸು ಪತ್ರ ನೀಡಿರುವ ಶಾಸಕರಿಗೂ ಕಿಕ್ ಬ್ಯಾಕ್ ಆಗಿದೆ. ಇಷ್ಟಾಗಿಯೂ ಹಗರಣಕ್ಕೂ ತಮಗೂ ಸಂಬಂಧವಿಲ್ಲ ಎನ್ನುತ್ತಿದ್ದಾರೆ.
ಹಗರಣದ ಹಗ್ಗ ಶಾಸಕರ ಕೊರಳಿಗೆ ಉರುಳಾಗುತ್ತದೆ ಎಂದು ಲಿಂಗಪ್ಪ ಎಚ್ಚರಿಸಿದರು. ಪ್ರಚಾರದಲ್ಲಿ ಕಾಂಗ್ರೆಸ್ ಮುಖಂಡರಾದ ಎಲ್. ಚಂದ್ರಶೇಖರ್, ಗಾಣಕಲ್ ನಟರಾಜ್, ಸಂಪತ್ಕುಮಾರ್, ವೀರಭದ್ರಪ್ಪ, ಹನುಮಂತಯ್ಯ, ಗೀತಾ ಪುಟ್ಟರಾಜು, ಕುಮಾರ್ ಮೋಹನ್, ಶ್ರುತಿ ಸಂಪತ್ಕುಮಾರ್, ಶೋಭಾ ಲಕ್ಷ್ಮಣಕುಮಾರ್, ಶ್ರೀಧರ್ ಪಾಲ್ಗೊಂಡಿದ್ದರು.