ಅಕ್ರಮ ಮದ್ಯದ ಬಾಟಲ್ ಜಪ್ತಿ
ಮಾಗಡಿ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 48 ರ ನಾರಸಂದ್ರ ಬಳಿ ಇರುವ ಶಾರ್ಕ್ ಡಾಬಾ ಮೇಲೆ ಚುನಾವಣಾ ವಿಚಕ್ಷಣ ದಳ ದಾಳಿ ನಡೆಸಿ ಡಾಬಾದಲ್ಲಿದ್ದ ಅಕ್ರಮವಾಗಿ ಇಟ್ಟುಕೊಂಡಿದ್ದ ಮದ್ಯದ ಬಾಟಲ್‌ಗಳನ್ನು ಜಪ್ತಿ ಮಾಡಿ ವಶಪಡಿಸಿಕೊಂಡಿರುವುದಾಗಿ ತಹಸೀಲ್ದಾರ್ ಡಾ.ಹರೀಶ್ ನಾಯಕ್ ತಿಳಿಸಿದ್ದಾರೆ. ಚುನಾವಣೆ ನೀತಿ ಸಂಹಿತೆ ಜಾರಿಯಿರುವುದರಿಂದ ಡಾಬಾಗಳಲ್ಲಿ ಮದ್ಯ ಸರಬರಾಜಿಗೆ ಅನುಮತಿ ಇಲ. ಆದರೂ ಸುಮಾರು 200ಕ್ಕೂ ಹೆಚ್ಚು ಮಂದಿ ಡಾಬಾದಲ್ಲಿ ಮದ್ಯ ಸೇವೆಯಲ್ಲಿ ತೊಡಗಿದ್ದರು. ಈ ಸಂಬಂಧಪಟ್ಟ ಡಾಬಾ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದ್ದು, ಡಾಬಾ ತೆರೆಯದಂತೆ ಆದೇಶ ನೀಡಲಾಗಿದೆ ಎಂದರು. ಚುನಾವಣಾ ವಿಚಕ್ಷಣ ದಳದ ಅಧಿಕಾರಿಗಳಾದ ಕೆ.ಬಿ. ಅಕ್ಕೋಜಿ, ಬಾಬುನಾಯಕ್, ರವಿ ಎಸ್. ಸೂರನ್, ಕುದೂರು ಪಿಎಸ್‌ಐ ರವಿ ದಾಳಿ ನೇತೃತ್ವ ವಹಿಸಿದ್ದಾಗಿ ತಹಸೀಲ್ದಾರ್ ತಿಳಿಸಿದರು.
ಸೌಕರ್ಯ ಕಲ್ಪಿಸುವ ಸದುದ್ದೇಶದಿಂದ ಸ್ಪರ್ಧೆ
ನೆಲಮಂಗಲ: ನೆಲಮಂಗಲ ವಿಧಾನ ಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಹಾಗೂ ಮೂಲ ಸೌಕರ್ಯ ಕಲ್ಪಿಸುವ ಸದುದ್ದೇಶದಿಂದಾಗಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದೇನೆ ಎಂದು ಅಭ್ಯರ್ಥಿ ಚೌಡಯ್ಯ ತಿಳಿಸಿದರು. ಅವರು ಸೋಮವಾರ ತಾಲ್ಲೂಕಿನ ವಾಜರಹಳ್ಳಿ ಗ್ರಾಮದಲ್ಲಿ ಮತಯಾಚನೆ ಮಾಡುವ ಸಂದರ್ಭದಲ್ಲಿ ಮಾತನಾಡುತ್ತಾ ನಾನು ಮೂಲತಃ ಸರ್ಕಾರಿ ನೌಕರ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು ಸರ್ಕಾರಿ ನೌಕರರ ರಾಜ್ಯ ಸಂಘದಲ್ಲಿ ಖಜಾಂಚಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನನ್ನನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕೆಜೆಪಿ ಅಭ್ಯರ್ಥಿಯಾಗುವಂತೆ ಒತ್ತಾಯಿಸಿದ್ದರಿಂದ ನನ್ನ ವೃತ್ತಿಗೆ ಸ್ವಯಂ ನಿವೃತ್ತಿಗೊಳಿಸಿಕೊಂಡು ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿದೆ. ಆದರೆ ಕೊನೆ ಗಳಿಗೆಯಲ್ಲಿ ನನಗೆ ಟಿಕೆಟ್ ತಪ್ಪಿದ್ದರಿಂದ ಹತಾಶನಾಗಿ ಪಕ್ಷೇತರ ಅಭ್ಯರ್ಥಿಯಾಗಿ ಮತ ಯಾಚನೆ ಮಾಡುತ್ತಿದ್ದೇನೆ ಎಂದರು. ಪ್ರಚಾರ ಉದ್ದಕ್ಕೂ ನಿವೃತ್ತ ಸರ್ಕಾರಿ ನೌಕರರು ಬಂಧುಗಳು, ಹಿತೈಷಿಗಳು ನೂರಾರು ಮಂದಿ ಪ್ರಚಾರ ಕಾರ್ಯದಲ್ಲಿ ಸಾಥ್ ನೀಡುತ್ತಿದ್ದಾರೆ. ನಾನು ಸ್ಪರ್ಧೆಯಲ್ಲಿ ಉಳಿದಿದ್ದರಿಂದ ಹೆಚ್ಚಿನ ಹಿಂಬಾಲಕರು ನನ್ನೊಂದಿಗೆ ಕೈಜೋಡಿಸಿದ್ದಾರೆ. ಇದರಿಂದ ನನ್ನ ಗೆಲುವಿಗೆ ಅನುಮಾನವಿಲ್ಲವೆಂದು ವಿಶ್ವಾಸ ವ್ಯಕ್ತ ಪಡಿಸಿದರು.
ಜೆಡಿಎಸ್ ರಾಮಣ್ಣ ಕಾಂಗ್ರೆಸ್‌ಗೆ ಸೇರ್ಪಡೆ
ಸೂಲಿಬೆಲೆ: ಇಲ್ಲಿನ ಜೆಡಿಎಸ್ ಮುಖಂಡ ರಾಮಣ್ಣ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಸೂಲಿಬೆಲೆಯಲ್ಲಿ ನಡೆದ ಸೇರ್ಪಡೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎನ್.ನಾಗರಾಜ್ ಮಾತನಾಡಿ, ಸುಭದ್ರ ಮತ್ತು ಸ್ಥಿರ ಸರ್ಕಾರಕ್ಕೆ ಕಾಂಗ್ರೆಸ್‌ಅನ್ನು ಮತದಾರರು ಬೆಂಬಲಿಸಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಇದೆ ಎಂದರು.