ಕನಕಪುರ ತಾಲೂಕಿನ ಮತದಾರ ಪ್ರಜ್ಞಾವಂತ: ಡಿ.ಕೆ.ಸುರೇಶ್
ಕನಕಪುರ: ಕನಕಪುರ ತಾಲೂಕಿನ ಪ್ರಜ್ಞಾವಂತ ಮತದಾರರು ಕ್ಷೇತ್ರದ ಅಭಿವೃದ್ಧಿಯನ್ನು ಗಮನಿಸಿ ಬೆಳವಣಿಗೆಯನ್ನು ಉತ್ತೇಜಿಸಿ ಮತ ಚಲಾಯಿಸುತ್ತಾರೆ ಎಂಬುದಕ್ಕೆ ಪುರಸಭಾ ಚುನಾವಣೆಗಳೇ ಸಾಕ್ಷಿಯಾಗಿವೆ. ನಗರ ಪ್ರದೇಶದಲ್ಲಿಯೇ ಜನರು ಆರೂವರೆ ಸಾವಿರ ಬಹುಮತ ದೊರಕಿಸಿಕೊಟ್ಟು ಜವಾಬ್ದಾರಿಯನ್ನು ಹೆಚ್ಚಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಡಿ.ಕೆ.ಸುರೇಶ್ ಹೇಳಿದ್ದಾರೆ.
ಅವರು ಇಲ್ಲಿನ ಕೆಂಕೇರಮ್ಮ ದೇವಾಲಯದ ಆವರಣದಲ್ಲಿ ಪಕ್ಷಸೇರ್ಪಡೆ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಶಾಸಕ ಡಿ.ಕೆ.ಶಿವಕುಮಾರ್ ನಾಯಕತ್ವವನ್ನು ಒಪ್ಪಿ ನೂರಾರು ಮಂದಿ ಕುರೂಪೇಟೆ ಜಗದೀಶ್ ನೇತೃತ್ವದಲ್ಲಿ ಕಾಂಗ್ರೆಸ್ಗೆ ಸೇರ್ಪಡೆಗೊಂಡರು.ಪುರಸಭಾಧ್ಯಕ್ಷ ಆರ್. ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಕನಕಪುರ ಪಟ್ಟಣ ವ್ಯಾಪ್ತಿಯ ಮೂರು ಸಾವಿರ ಜನರಿಗೆ ಬಿಜಿಎಸ್ ಲೇಔಟ್ ನಿರ್ಮಿಸಿ ಉಚಿತ ನಿವೇಶನ ಹಂಚಿದ್ದೇವೆ. ನೂರಾರು ಮಂದಿ ಈಗಾಗಲೇ ಮನೆಗಳನ್ನು ಕಟ್ಟಲು ಪ್ರಾರಂಭಿಸಿದ್ದಾರೆ. ಹಲವಾರು ಕಡೆಗಳಲ್ಲಿ ಶುದ್ಧ ಕುಡಿಯುವ ನೀರು ವಿತರಣಾ ಘಟಕಗಳು ಜನಮನ ಸೆಳೆದಿವೆ ಎಂದರು. ವಿಪ ಮಾಜಿ ಸದಸ್ಯ ಎಸ್.ರವಿ, ಕಿಟ್ಟಿ, ಮಹದೇವನಾಯ್ಕ ಪಾಲ್ಗೊಂಡಿದ್ದರು.